Friday, July 14, 2017

ಹೂ ನಗೆಯ ಹೂ ಮಾರುವಾಕೆ


ಪ್ರಸಾದ್ ಸಾಮಕ

ಗುಂಡು ಮಲ್ಲಿಗೆಯ ಮುಖ
ಕನಕಾಂಬರದ ಕೆನ್ನೆ
ಸೇವಂತಿಗೆಯ ಬಟ್ಟು
ದಾಸವಾಳದಂತೆ ಅರಳಿರುವ ಶರೀರ
ಸಂಪಿಗೆಯ ಸರಳತೆ
ನೈದಿಲೆಯ ನಡೆ
ಕಮಲದ ಕಣ್ಣು
ಪಾರಿಜಾತದ ಪರಿವಾರ
ತಾವರೆಯ ತುಟಿ
ಚೆಂಡು ಹೂವಿನ ಚಹರೆ
ಗುಲಾಬಿಯ ಮುಗುಳ್ನಗೆ
ಸೂರ್ಯಕಾಂತಿಯ ಶಿರ
ಕಣಗಿಲೆಯ ಕಳೆ
ಸಂಜೆ ಮಲ್ಲಿಗೆಯ ಸ್ವಸ್ಥೆ
ನಂದಿ ಬಟ್ಟಲಿನ ನಾಲಿಗೆ
ಸುಗಂಧರಾಜದ ಸೌಗಂಧ
ಕೇದಗೆಯ ಕೇಶ
ರಂಜದ ಹೂವಿನ ಉಗುರು
ದತ್ತೂರದ ದಂತ
ಜಾಜಿಯಾ ಮೂಗು
ದೇವಗಣಿಗಾಲಿನ ದೃಷ್ಟಿ
ಮುಟ್ಟಿದರೆ ಮುನಿಯಂತಿರುವ ಮನಸು
ಕಾಮಲತೆಯಂತೆ ಹತ್ತುವೆನೆಂಬ ಭಾವ
ಅದಕ್ಕೆ ಅಲ್ಲವೇ ನೀನಿರುವುದು ಹೂವುಗಳ ಮಧ್ಯೆ
ಎಂದಾಗ ಚಿತ್ರಕಾರ ನಗದಿರಳೆ ಈ ಮಹಿಳೆ !


ಪ್ರದೀಪ್ ಅವಧಾನಿ

ಎಲ್ಲೆಲ್ಲಿಂದಲೋ
ಬಂದು ಸೇರಿಹವು
ಹೂವುಗಳು

ತಾನೊಂದೆಯೋ, ಜೊತೆಗೂಡಿಯೋ
ಅರಳಿದ ಮುಖದೋರುತ್ತ
ಸುವಾಸನೆ ಬೀರುತ್ತಾ
ಬಣ್ಣದ ಮೈದೋರುತ್ತಾ
ದಾರಿಹೋಕರ ಕಣ್ಸೆಳೆಯುತ್ತಾ
ವೈವಿಧ್ಯತೆಯಲಿ ನಳನಳಿಸುತ್ತಿವೆ
ಹೂವುಗಳು

ಬಿಡಿ ಹೂವಾಗಿ, ಹಾರವಾಗಿ,
ಸಂಭ್ರಮ ಸಮಾರಂಭಕೆ ಸೌಂದರ್ಯವಾಗಿ,
ಸುಂದರ ಶೃಂಗಾರಕೆ ಜೀವಕಳೆಯಾಗಿ,
ಸಾಧಕನಿಗೆ ಸನ್ಮಾನವಾಗಿ
ಉತ್ಸವದಿ ಹೂ ಮಳೆಯಾಗಿ,
ಪ್ರೇಮಿಯೊಬ್ಬಳ ಮನವರಳಿಸಿ,
ಗೃಹಿಣಿಯೊಬ್ಬಳ ಮನೆ ಅರಳಿಸಿ,
ದೇವ ಪಾದವ ಅಲಂಕರಿಸಿ,
ಅನಂತ ಭಾವಕೆ ಸಂಗಾತಿಯಾಗಿ
ಗಮ್ಯವ ಸೇರಿದರಲ್ಲವೇ
ಹೂವಿನ ಜೀವನಕೆ ಸಾರ್ಥಕ್ಯ

ನಾವು ಕೂಡ ಹೂಗಳಲ್ಲವೇ?


ಕ್ರಿಶ್ ಕೃಷ್ಣಮೂರ್ತಿ

***************************
ಹೂವ ತೋಟ --

ತಂಪಾದ ಇರುಳಿನಲಿ ಚಂದಿರನ ಬೆಳಕಿನಲಿ
ಸೊಂಪಾದ ಗಿಡಗಳಲಿ ಹಿಂದಿರದ ಎಲೆಬದಿಗೆ
ಕೆಂಪು ಬಿಳಿ ಅರಿಶಿನದ ಗಮ್ಮ ಹೊಮ್ಮುತಲಿ
ಕಂಪ ಬೀರುವ ಹೂವ ಬಣ್ಣ ಬಣ್ಣದಾ ಹೊದಿಕೆ
*******************************

ನೋವ ನೋಟ --

ಬಾಲೆಯಾದರೂ ದುಡಿವೆ ನಿನಗೆ ರಾತ್ರಿ ಹಗಲೇ
ಮಾಲೆ ಕಟ್ಟಿದೆ ಕೋಳಿ ಕೂಗುವಾ ಮೊದಲೇ
ಹೂವ ಮಾರುವ ಹೂವಾಡಗಿತ್ತಿ
ನಿನ್ನೋವ ಮರೆತು ಹೇಗೆ ನಗಾಡತ್ತೀ

ಮಾರುಕಟ್ಟೆಯ ದಾರಿ ಸರಿದು ನಡೆವ
ಮಾರೇನು ಮೊಳವೇನು ಕೊಳ್ಳಲೆಷ್ಟಾದರೂ ಹೂವ
ಮರುಗ ಜಾಜಿ ಮಲ್ಲಿಗೆ ಕನಕಾಂಬರವ
ಮರಳಿ ಬರುವರವರು ಮತ್ತೆ ನಿನ್ನ ತಾವ

ಹೂವ ಮಾರುವ ಹೂವಾಡಗಿತ್ತಿ
ನಿನ್ನೋವ ಮರೆತು ಹೇಗೆ ನಗಾಡತ್ತೀ
*******************************


No comments:

Post a Comment

ಹೂ ನಗೆಯ ಹೂ ಮಾರುವಾಕೆ

ಪ್ರಸಾದ್ ಸಾಮಕ ಗುಂಡು ಮಲ್ಲಿಗೆಯ ಮುಖ ಕನಕಾಂಬರದ ಕೆನ್ನೆ ಸೇವಂತಿಗೆಯ ಬಟ್ಟು ದಾಸವಾಳದಂತೆ ಅರಳಿರುವ ಶರೀರ ಸಂಪಿಗೆಯ ಸರಳತೆ ನೈದಿಲೆಯ ನಡೆ ಕಮಲದ ಕಣ್ಣು ಪಾ...