Friday, July 14, 2017

ಹೂ ನಗೆಯ ಹೂ ಮಾರುವಾಕೆ


ಪ್ರಸಾದ್ ಸಾಮಕ

ಗುಂಡು ಮಲ್ಲಿಗೆಯ ಮುಖ
ಕನಕಾಂಬರದ ಕೆನ್ನೆ
ಸೇವಂತಿಗೆಯ ಬಟ್ಟು
ದಾಸವಾಳದಂತೆ ಅರಳಿರುವ ಶರೀರ
ಸಂಪಿಗೆಯ ಸರಳತೆ
ನೈದಿಲೆಯ ನಡೆ
ಕಮಲದ ಕಣ್ಣು
ಪಾರಿಜಾತದ ಪರಿವಾರ
ತಾವರೆಯ ತುಟಿ
ಚೆಂಡು ಹೂವಿನ ಚಹರೆ
ಗುಲಾಬಿಯ ಮುಗುಳ್ನಗೆ
ಸೂರ್ಯಕಾಂತಿಯ ಶಿರ
ಕಣಗಿಲೆಯ ಕಳೆ
ಸಂಜೆ ಮಲ್ಲಿಗೆಯ ಸ್ವಸ್ಥೆ
ನಂದಿ ಬಟ್ಟಲಿನ ನಾಲಿಗೆ
ಸುಗಂಧರಾಜದ ಸೌಗಂಧ
ಕೇದಗೆಯ ಕೇಶ
ರಂಜದ ಹೂವಿನ ಉಗುರು
ದತ್ತೂರದ ದಂತ
ಜಾಜಿಯಾ ಮೂಗು
ದೇವಗಣಿಗಾಲಿನ ದೃಷ್ಟಿ
ಮುಟ್ಟಿದರೆ ಮುನಿಯಂತಿರುವ ಮನಸು
ಕಾಮಲತೆಯಂತೆ ಹತ್ತುವೆನೆಂಬ ಭಾವ
ಅದಕ್ಕೆ ಅಲ್ಲವೇ ನೀನಿರುವುದು ಹೂವುಗಳ ಮಧ್ಯೆ
ಎಂದಾಗ ಚಿತ್ರಕಾರ ನಗದಿರಳೆ ಈ ಮಹಿಳೆ !


ಪ್ರದೀಪ್ ಅವಧಾನಿ

ಎಲ್ಲೆಲ್ಲಿಂದಲೋ
ಬಂದು ಸೇರಿಹವು
ಹೂವುಗಳು

ತಾನೊಂದೆಯೋ, ಜೊತೆಗೂಡಿಯೋ
ಅರಳಿದ ಮುಖದೋರುತ್ತ
ಸುವಾಸನೆ ಬೀರುತ್ತಾ
ಬಣ್ಣದ ಮೈದೋರುತ್ತಾ
ದಾರಿಹೋಕರ ಕಣ್ಸೆಳೆಯುತ್ತಾ
ವೈವಿಧ್ಯತೆಯಲಿ ನಳನಳಿಸುತ್ತಿವೆ
ಹೂವುಗಳು

ಬಿಡಿ ಹೂವಾಗಿ, ಹಾರವಾಗಿ,
ಸಂಭ್ರಮ ಸಮಾರಂಭಕೆ ಸೌಂದರ್ಯವಾಗಿ,
ಸುಂದರ ಶೃಂಗಾರಕೆ ಜೀವಕಳೆಯಾಗಿ,
ಸಾಧಕನಿಗೆ ಸನ್ಮಾನವಾಗಿ
ಉತ್ಸವದಿ ಹೂ ಮಳೆಯಾಗಿ,
ಪ್ರೇಮಿಯೊಬ್ಬಳ ಮನವರಳಿಸಿ,
ಗೃಹಿಣಿಯೊಬ್ಬಳ ಮನೆ ಅರಳಿಸಿ,
ದೇವ ಪಾದವ ಅಲಂಕರಿಸಿ,
ಅನಂತ ಭಾವಕೆ ಸಂಗಾತಿಯಾಗಿ
ಗಮ್ಯವ ಸೇರಿದರಲ್ಲವೇ
ಹೂವಿನ ಜೀವನಕೆ ಸಾರ್ಥಕ್ಯ

ನಾವು ಕೂಡ ಹೂಗಳಲ್ಲವೇ?


ಕ್ರಿಶ್ ಕೃಷ್ಣಮೂರ್ತಿ

***************************
ಹೂವ ತೋಟ --

ತಂಪಾದ ಇರುಳಿನಲಿ ಚಂದಿರನ ಬೆಳಕಿನಲಿ
ಸೊಂಪಾದ ಗಿಡಗಳಲಿ ಹಿಂದಿರದ ಎಲೆಬದಿಗೆ
ಕೆಂಪು ಬಿಳಿ ಅರಿಶಿನದ ಗಮ್ಮ ಹೊಮ್ಮುತಲಿ
ಕಂಪ ಬೀರುವ ಹೂವ ಬಣ್ಣ ಬಣ್ಣದಾ ಹೊದಿಕೆ
*******************************

ನೋವ ನೋಟ --

ಬಾಲೆಯಾದರೂ ದುಡಿವೆ ನಿನಗೆ ರಾತ್ರಿ ಹಗಲೇ
ಮಾಲೆ ಕಟ್ಟಿದೆ ಕೋಳಿ ಕೂಗುವಾ ಮೊದಲೇ
ಹೂವ ಮಾರುವ ಹೂವಾಡಗಿತ್ತಿ
ನಿನ್ನೋವ ಮರೆತು ಹೇಗೆ ನಗಾಡತ್ತೀ

ಮಾರುಕಟ್ಟೆಯ ದಾರಿ ಸರಿದು ನಡೆವ
ಮಾರೇನು ಮೊಳವೇನು ಕೊಳ್ಳಲೆಷ್ಟಾದರೂ ಹೂವ
ಮರುಗ ಜಾಜಿ ಮಲ್ಲಿಗೆ ಕನಕಾಂಬರವ
ಮರಳಿ ಬರುವರವರು ಮತ್ತೆ ನಿನ್ನ ತಾವ

ಹೂವ ಮಾರುವ ಹೂವಾಡಗಿತ್ತಿ
ನಿನ್ನೋವ ಮರೆತು ಹೇಗೆ ನಗಾಡತ್ತೀ
*******************************


ಯೋಗದ ಅಜ್ಜಿ


ನಾನ್ನಮ್ಮಾಳ್ - 97 ವರ್ಷದ ನುರಿತ ಯೋಗ ಪಟು ಹಾಗೂ ಶಿಕ್ಷಕಿ

ಪ್ರಸಾದ್ ಸಾಮಕ

(ಯಾರೆಂದು ತಿಳಿಯುವ ಮುನ್ನ..)

ಅಯ್ಯೋ ವಿಧಿಯೇ ತಮಿಳ್ ಬರಲ್ಲ
ಪೇಪರ್ ಓದಕ್ಕಾಗಲ್ಲ ಹೆಸರೂ ತಿಳಿಯಲ್ಲ
ಬಿ ಕೆ ಏಸ್ ಹೌದೋ ಅಲ್ವೋ  ಗೊತ್ತಿಲ್ಲ
ಕನ್ನಡಕವಿಲ್ದೆ ಓದ್ತಾ ಇರೋ ಹಾಗೇನೂ ಕಾಣಲ್ಲ ದಿಟ್ಟರಿಸುತ್ತಿರೋ ಇವಜ್ಜಿಯ ಕೂದಲೆಲ್ಲ ಬಿಳಿಯಲ್ಲ
ಹಳೆ ಪ್ರೇಮಿಯೆಂದರೇ ಅಲ್ಲಗಳೆಯಕ್ಕೆ ಆಗಲ್ಲ


ಪ್ರದೀಪ್ ಅವಧಾನಿ

ಐಫೋನ್ ಎಷ್ಟು ಚೆನ್ನ
ಸ್ಮಾರ್ಟ್ ಟಿವಿ ಎಷ್ಟು ಚೆನ್ನ
ಬೆಕ್ಕಸ ಬೆರಗಾಗಿದೆ ಇಂದಿನ ಪೀಳಿಗೆ
ಎಲ್ಲಕ್ಕಿಂತ ಮಿಗಿಲು ಎನಿಸುವ ಟೆಕ್ನಾಲಜಿಗೆ

ಕಂಡಿರಾ 97ರ ಹರೆಯದ ಈಕೆಯ?
ತನ್ನ ದೇಹವ ಬಾಗಿಸುವ ಪರಿಯ
ನಮ್ಮೀ ದೇಹಕ್ಕಿಂತ ಉಂಟೇ ವಿಸ್ಮಯ?
ಎಂಥಾ ಟೆಕ್ನಾಲಜಿಯೂ ಇದರ ಮುಂದೆ ಕಡಿಮೇಯಾ

ದೇಹವೆಂಬ ಗುಡಿಯ ಒಳಗೆ
ಜೀವ ಕೊಟ್ಟ ಉಸಿರನಿಟ್ಟ
ಅಂಗಾಂಗ ಹಲವು ಬಗೆ
ಅರಿತುಕೊ ಎಂದು ಬುದ್ದಿ ಕೊಟ್ಟ

ದೇಹವೇನು ಬರೇ ವಾಹನವೇ?
ಜ್ಞಾನಿಗಳು ನುಡಿದಿಹರು
'ಶರೀರವೇ ಧರ್ಮದ ಸಾಧನ'
ಮೈಮನವ ಕಾಪಾಡು ಜೋಪಾನ!

ಪ್ರಾಣವೀಣೆಯ ಶೃತಿಯಾಗಿಸೆ
ಯೋಗ ಮಿಳಿತ ಉಸಿರ ಹಿಡಿತ
ಜೀವನದ ಅನುಕ್ಷಣವನಾಗಿಸೆ
ಸಂಯಮ ಸುಮಧುರ ಸಂಗೀತ

ದಿನವೂ ಮಾಡಿದಲ್ಲಿ ಯೋಗಾಸನ
ದೊರೆವುದು ಆರೋಗ್ಯ ಸಿಂಹಾಸನ
ಇದಾಗಲಿ ನಮ್ಮ ನಿತ್ಯದನುಶಾಸನ
ಯೋಗಃ ಕರ್ಮ ಸುಕೌಶಲಂ!

ವಿಚಿತ್ರವೀ ನೃತ್ಯ ಭಂಗಿ


 ಇದು ಒಡಿಸ್ಸಿ ನೃತ್ಯ ರೂಪಕ. ಇಲ್ಲಿ ತೋರಿಸುತ್ತಿರುವ ಭಂಗಿ "ಛಿನ್ನ ಮಸ್ತಕಾ' ಎಂಬ ಹೆಸರಿನ ದೇವತೆಯದು. ಕಾಮದ ಅಧಿದೇವತೆ ಯಾದ ಈಕೆ ಒರಿಸ್ಸಾದಲ್ಲಿ ನವರಾತ್ರಿಯ ಸಮಯದಲ್ಲಿ ಪೂಜಿಸಲ್ಲಡುವಳು. ಹಾಗೆಯೇ ಬೌದ್ದರಲ್ಲೂ ಹಿಂದೆ ಇದೇ ರೀತಿಯ ದೇವತೆ ಇದ್ದಳೆಂದು ಪ್ರತೀತಿ.


ಪ್ರಭಾತ್ ಜೋಶಿ

ನಿಜ ಮುಖವನ್ನು ಅವಚಿದರೊ,
ಕೃತಕ ಮೊಗವ ಚಾಚಿರುವೆ
ನೀ ಏನು ಬಚ್ಚಿಡುವೆ

ಮುಖ ಕೃತಕವಾದರೂ,
ಅದರಲ್ಲಿಯೂ ತವಕ, ಭಯ.
ತವಕ ಭಯವನ್ನು ನೀ ಹೀಗೆ ಬಚ್ಚಿಡುವೆ

ವೀರ ಮುದ್ರೆಯಲ್ಲಿದ್ದರೂ, ಹಿಂತ್ತಿರುಗಿ ನೋಡಿದೆ,
ಸೋಲಿನ ಭಯ ನೀ ಹೇಗೆ ಬಚ್ಚಿಡುವೆ

ಮುನ್ನುಗ್ಗುವುದೇ ಜೀವನವಾದರೆ,
ಕ್ಷಣ ಕಾಲ ಹಿಂತಿರುಗಿ ನೋಡಿದೆ,
ಅರಿವಿನ ಭಯ ನೀ ಹೀಗೆ ಬಚ್ಚಿಡುವೆ


ಪ್ರದೀಪ್ ಅವಧಾನಿ

'ನಾನು' ಜನಿಸಿದೆ,
'ನಾನು' ನಡೆದೆ,
'ನಾನು' ನುಡಿದೆ,
'ನಾನು' ಮಾಡಿದೆ,
'ನಾನು' 'ನಾನೆಂಬುದರ' ನರ್ತನ
ಜೀವನಾದ್ಯಂತ

ನೀನು-ಅವನು-ಅದು ಎಂಬ ಭೇದ
ಆಳೆತ್ತರಕ್ಕೆ ಬೆಳೆಸಿದೆ ನನ್ನ ಮದಮೇಧ!
ಅರಿವಿಗೆ ನಿಲುಕದ ಮೋಹ
ತೀರದ ಕಾಮನೆಗಳ ದಾಹ

ಎನಗರಿವಿಲ್ಲದ 'ನಾನು' ಹಲವು ಮುಖ
ಒಮ್ಮೆ ಭೀಮನ ಆಕ್ರೋಶ,
ಇನ್ನೊಮ್ಮೆ ದುಶ್ಯಾಸನನ ಆವೇಶ,
ಮತ್ತೊಮ್ಮೆ ನಿರಾಸೆ ನಿಸ್ಪೃಹ ಹತಾಶ

ನಾನು-ನೀನುಗಳ ನಿತ್ಯ ಸಮಾವೇಶ
ಪ್ರಕೃತಿ-ಪುರುಷರ ನಿರಂತರ ಸಂಘರ್ಷ
ಸಂದಿಗ್ಧ ಸಂತಾಪವೇ ಪ್ರತಿ ನಿಮಿಷ
ಮನ ಅರಸಿದೆ ಸುಖ ಶಾಂತಿ ಸಂತೋಷ
ಎಂದಿಗೆ ಮುಕ್ತಿ? ಎಲ್ಲಿದೆ ನಾಕ?
ಕಳಚುವುದೆಂದಿಗೆ ಸುಳ್ಳಿನ ವೇಷ?

ಕರ್ಮಭಕ್ತಿಗಳ ತೊಳಲಾಟ ಅನೂಹ್ಯ ಅಗಮ್ಯ
ತಿಳಿಯದಾಗಿದೆ ಯೋಗಾಯೋಗಗಳ ತಾರತಮ್ಯ
ತಡೆಯಲಾಗದ ಮುಕ್ತಿ ಬಯಕೆಯ ತೀವ್ರತಪನೆ ಅದಮ್ಯ
ಇರುವುದೊಂದೇ ಮಾರ್ಗ ಈಗ, ತಾಯಿ ನಿನ್ನ ಶರಣ್ಯ

ಶಕ್ತಿರೂಪಿಣಿ ಜೀವತಾರಿಣಿ
ಮಂತ್ರತಂತ್ರ ಸ್ವರೂಪಿಣಿ
ವಿಲಯನರ್ತನ ರೌದ್ರರೂಪಿಣಿ
ಪುನರ್ ಸೃಷ್ಟಿ ಪ್ರದಾಯಿನಿ

ನೀಡೆನಗೆ
ಶತಸಹಸ್ರ ಸೂರ್ಯರೂಪದ ವೀರವೀರ್ಯವ
ನಡೆಸುವೆ ನಾ
ಅಜ್ಞಾನ ಭ್ರಾಂತಿ ಅಹಂಕಾರಭರಿತ ಶಿರಚ್ಛೇದವ
ಕುಡಿಸು ನೀ
ಅನಂತಾನಂದ ಅಮೃತಮಯ ಜ್ಞಾನರುಧಿರವ
ತೋರೆನಗೆ
ಅರಿಷಡ್ವರ್ಗವ ಜಯಿಸಿದ ಶಿವಸುಂದರ ನಗ್ನಸತ್ಯವ

ತ್ರಾಹಿ ವಿಚಿತ್ರಮಯಿ! ತ್ರಾಹಿ ಛಿನ್ನಮಸ್ತಕಾ!
ಪಾಹಿ ಮಹಾದೇವಿ! ಪಾಹಿ ಪ್ರಚ್ಛನ್ನರೂಪಿಕಾ!


ಕ್ರಿಶ್ ಕೃಷ್ಣಮೂರ್ತಿ

ರುಂಡ ಮುಂಡ ಚಂಡಿ ತಾಂಡವ
ನಾನು ನನ್ನದು ಪ್ರತೀಕ ಶಿರವ
ಚಿತ್ರ ಚಿತ್ತಾರವ ವಿಚಿತ್ರ ನೃತ್ಯವ
ತಲೆ ತ್ಯಜಿಸಿದೊಡೆ ನಾವ್ ಅರಿವೆವಾ?

ನನ್ನತನವ ಬಿಡಲು ಅವಳು
ತನ್ನ ತನುವನೇ ಕೊಡುವಳೆ?
ನರ್ತನದಿ ಮಾಯ ಶಿರವ
ಅರ್ಪಣೆಯೆಂದೊಡ್ಡುವಳೇ?

ನಾ ಮಾಡುವೆನೆಂಬ ಮಾಯೆಯ
ನನ್ನದೇನಿಲ್ಲವೆಂದು ದಾಟುತಾ
ದಾರಿತೋರ್ವನೊಬ್ಬನಿರುವ
ಅವಗೆ ಬಾಗುವೆ ನನ್ನಿಲ್ಲದ ಶಿರವ!

120 degrees

ಅರಿಝೋನ.. ಅಲ್ಲ.. ಉರಿಝೋನ ಬಿಸಿಲಿಗೆ ಹೊರಹೊಮ್ಮಿದ ಆರ್ತನಾದ

ನಿಮಗಾಗಿ Hot Hot

'ನಲಿವ ಗುಲಾಬಿ ಹೂವೇ' ಹಾಡಿನ ಧಾಟಿಯಲ್ಲಿ

ಸುಡುವ ಸೂರ್ಯನ ಬಿಸಿಲೇ
ಮುಗಿಲಾ ಮೇಲೇರಿ ನಗುವೇ
ನಿನಗೆ ನಮ್ಮೇಲೇ ಒಲವೊ
ಅರಿಯೇ ಹೀಗೇಕೆ ಛಲವೊ
ಸುಡುವ ಸೂರ್ಯನ ಬಿಸಿಲೇ
ಒಲವೂ ....ಛಲವೂ...ಒಲವೂ ....ಛಲವೂ..

ಸುಡುವೇ ovenನ್ನಿನಂತೆ, ಉರಿವೆ ಹೊಸ Grilliನಂತೆ
Sun screen ಸಾಕಾಗದಂತೆ, ACನೂ ಕಿತ್ತೊಗುವಂತೆ

ಬಿಸಿಲಿನ ಝಳದಲಿ ಸಾಯುತ ನರಳಿದೆ
ಕೆಂಡವಾಗಿ, ಬೆಂಡಾಗಿ,

ಆಚೆ ಕಾಲಿಡಲಾರದಂತೆ, ಬದುಕೋ ಬಯಕೇನೂ ಕೊಂದೆ
ಬಿಸಿ ಗಾಳಿಯಲಿ ಚರುಮವ ಸುಲಿದೆ
ಹಿಂಗೇಕೇ ನನ್ನ ಸಾಯ್ ಹೊಡೆದೆ
ಹಿಂಗೇಕೇ ನನ್ನ ಸಾಯ್ ಹೊಡೆದೆ

ಸುಡುವ ಸೂರ್ಯನ ಬಿಸಿಲೇ
ಮುಗಿಲಾ ಮೇಲೇರಿ ನಗುವೇ
ನಿನಗೆ ನಮ್ಮೇಲೇ ಒಲವೊ
ಅರಿಯೇ ಹೀಗೇಕೆ ಛಲವೊ
ಸುಡುವ ಸೂರ್ಯನ ಬಿಸಿಲೇ
ಒಲವೂ ....ಛಲವೂ...ಒಲವೂ ....ಛಲವೂ..

- ಪ್ರದೀಪ್ ಅವಧಾನಿ


ಕ್ರಿಶ್ ಕೃಷ್ಣಮೂರ್ತಿ:

ನ್ಯಾಷನಲ್ ನ್ಯೂಸೆಲ್ಲಾ ಫಿನಿಕ್ಸ್ ಹೀಟ್ ಬಗ್ಗೆ
ಇಲ್ಲಿ ಏರುತ್ತಿರುವುದಂತೆ ಬರೀ ಪಾದರಸ ಗಾರೆ
ನೀವ್ಯಾರಾದ್ರೂ ಕರೆಮಾಡಿ ಹೇಳಿ ಆ ನ್ಯೂಸ್ನವನ್ಗೆ
ತಂಪ ತಂದಿಹುದಿಲ್ಲಿ ಕನ್ನಡ ಪದ್ಯರಸ ಧಾರೆ!


ಚಾಕ್ಲೇಟು ದೇವಿ


ದೇವಿಗೆ ಚಾಕಲೇಟು ಅಲಂಕಾರ (zoom and see)

ಕ್ರಿಶ್ ಕೃಷ್ಣಮೂರ್ತಿ:

ಪವಡಿಸಿರುವಳು ದೇವಿ
ಚಾಕ್ಲೇಟ್ಲಿ, ಬದಿಗಿಟ್ಟು ವೀಣೆ
ನಾವಿನ್ನೂ ಜೂನ್ ನಲ್ಲಿದ್ದೀವಿ
ಆಗಲೇ ಹ್ಯಾಲೋವೀನೇ?

ಪ್ರದೀಪ್ ಅವಧಾನಿ

ದೇವರಾದರೇನು ಇರೊಲ್ವೇ ಆಸೆ
ತಿನ್ನಬೇಕೆನಿಸುತ್ತೆ ಚಾಕಲೇಟು
ಅದಕ್ಕಾಗಿ ಕಾಯ್ಬೇಕು ಅಂದ್ರೆ ಆಗುತ್ತೆ ಲೇಟು
ಅಷ್ಟಕ್ಕೂ ನಮ್ಮ ದೇವ್ರು ತುಂಬಾ ನೀಟು
ನಿತ್ಯ ಸಿಂಗಾರ ಮಾಡಿ-ನೋಡಿ ತುಂಬೋಗುತ್ತೆ ಹಾರ್ಟು!


ಕ್ರಿಶ್ ಕೃಷ್ಣಮೂರ್ತಿ:

ದೇವಿ ಚಿತ್ರವ ನೋಡಿ ಹೇಳಿದಳು ನಮ್ಮಾಕೆ
ಈ ತರಹ ಸೀರೆ ನನ್ನ ಹತ್ತಿರವಿಲ್ಲ ಯಾಕೆ?
ನಾನಂದೆ -
ಮರೆತೆಯಾ ಹುಚ್ಚಿ ನಮ್ಮ ಬೇಸಿಗೆಯ ಅರಿಜೋನಾ
ಕುದಿವ ಸೂರ್ಯನಾಗುವನು ನಿನಗೆ ದುಶ್ಯಾಸನಾ!

ಸಾಲು ಸ್ಫೂರ್ತಿ - ಮಾಡು ಪೂರ್ತಿ

ಸಾಲನ್ನು ಉಪಯೋಗಿಸಿ, ಪದ್ಯ/ಕವಿತೆ ಪೂರ್ಣಗೊಳಿಸಿ

"ಬಾರಿನ ವಿಶೇಷ ಭಟ್ಟನೇ ಬಲ್ಲ"!

ಪ್ರದೀಪ್ ಅವಧಾನಿ

ನೆಕ್ಕುತಲಿ ಚಪ್ಪರಿಸುತಲಿ
ಸುಗ್ರಾಸ ಭೋಜನವ ಆಸ್ವಾದಿಸುವ
ಚಪಲ ಚೆನ್ನಿಗರಾಯರೆಲ್ಲಾ
ಭಲೇ ಭಲೇ ಎಂದೆನಿಸುತಿಹ
ಷಡ್ರೋಸೋಪೇತ ಸಾಂ-
ಬಾರಿನ ವಿಶೇಷ ಭಟ್ಟನೇ ಬಲ್ಲ!

ಕ್ರಿಕೆಟ್ ಆಡೋಣು ಬಾರ


ಪ್ರಸಾದ್ ಸಾಮಕ

ವಾಮಾನನಾದರೇನಂತೆ  ನಾನೇ ನಮ್ಮಳ್ಳಿಯ ಬಹದ್ದೂರ್ ಗಂಡಂತೆ
ಬಳೆಸಿದ ಬಟ್ಟೆಯುಟ್ಟರೇನಂತೆ  ಹೊಡೆತವಿದು ಆರಂಕಿಯದಂತೆ

ಚಪ್ಪಲಿಯಿಲ್ಲದಿದ್ದರೇನಂತೆ ಪಾದಗಟ್ಟಿಯಾಗುವುದಂತೆ
ಮೈದಾನವಿಲ್ಲದಿದ್ದರೇನಂತೆ ಬತ್ತಿದ್ದ ಕಾಲುವೆ ನಮಗಂತೆ

ವಿಕೇಟಿಲ್ಲದಿದ್ದರೇನಂತೆ ಮುರಿದ ಹಳೇ ದಾಂಡಿದೆಯಂತೆ  ದಾಂಡಿಲ್ಲದಿದ್ದರೇನಂತೆ ಹಳ್ಳಿಯಲ್ಲಿದೆ ಪಟ್ಟಿ ಮಾರುವ ಸಂತೆ

ಸ್ಲೀಪ್ಪಿಗೊಬ್ಬನಿದ್ದರೇನಂತೆ ಬೈಸಿಗಿಬ್ಬರಿರುವುದೇ ಲೇಸಂತೆ
ಚೆಂಡು ಗೌಡರ ಶ್ವಾನ ತುಂಬಿದ ಹೊಲಕ್ಕೋಗದಿರದಂತೆ !


ಕ್ರಿಶ್ ಕೃಷ್ಣಮೂರ್ತಿ

ಮುಳ್ಳಿರಲಿ ಕಲ್ಲಿರಲಿ ದಾರಿ ಸುಡುತಿರಲಿ
ಕೊಂಡೊಯ್ದವೆನ್ನೆಲ್ಲೆಡೆ ಹತ್ತಾರು ವರುಷದಲಿ
ಊರಿ ಹಿಮ್ಮಡಿಯ ಹೆಮ್ಮೆಯಿಂ ಮುನ್ನಡೆವ ಹೆಜ್ಜೆ
ಬೆತ್ತಲೆಯಾದರೇನಂತೆ ಪಾದಂಗಳಿಗೆಲ್ಲಿಯ ಲಜ್ಜೆ?


ಪ್ರದೀಪ್ ಅವಧಾನಿ

'ಬಾರೋಲೇ ಬಾರೋಲೇ ನಾವು ಆಟ ಆಡೋಣ'
'ಬಾಲ್ ಇಲ್ಲಾ ಮಗಾ ನಾವು ಏನ್ಮಾಡೋಣ?'

'ನಿನ್ನೆ ಮಸ್ತಾಗಿ ಲಗೋರಿ ಆಡಿದ್ಬಾಲು ಏನಾಯ್ತಣ್ಣ?'
'ಆ ಮೆಂಟಲ್ ಮಂಜ ಬಾಲ್ ಎಲ್ಲೋ ಬಚ್ಚಿಟ್ಟೌನಣ್ಣ'

'ಲೇ ಮಂಜ ಬಾಲ್ ತೆಗೆಯೋ ಲೇಟಾಯ್ತದೆ'
'ಬೆನ್ನಿಗ್ ನಿನ್ನೆ ಬಿದ್ದೇಟಿನ್ನೂ ಚುರ್ ಚುರ್ ಅಂತದೆ'

'ಲಗೋರಿ ಬುಗುರಿ ಬೇಡಣ್ಣೋ ಬೇರೇನಾರ ಆಡಾವ'
'ಬದ್ರೀ ಶಂಕ್ರೀ ಅವ್ರೇ ಬನ್ರೋ ಕ್ರಿಕೆಟ್ ಆಡೊವ'

'ಬಾಲ್ ಐತೆ ಬ್ಯಾಟ್ ಇಲ್ಲ ಏನ್ಮಾಡೋದ್ಲೇ?'
'ಬ್ಯಾಟ್ ಮುರಿದ್ರೇನಂತೆ ಪಟ್ಟಿ ಕಟ್ಟೋಲೇ'

'ಬ್ರೈನಲ್ಲೇನು ಬೂಸಾ ಗುರು ಬೊಂಬಾಟ್ ಐಡಿಯಾ'
'ಐಡಿಯಾಗೇನು ಕಾಸಾ ಗುರು ತಗೋ ಶಾಟ್ ಹೊಡೀತಿಯಾ'

'ಬ್ಯಾಟ್ ನಂದು ಬ್ಯಾಟಿಂಗ್ ನಂದೇ ತಿಳೀತೇನ್ರೋಲೇ'
'ಬಲ್ನನ್ಮಗ ಈ ಸೀನ ಸಖತ್ ಸೀನ್ ಕೊಡ್ತಾನ್ಲೇ'

'ನನ್ ಬೌಲಿಂಗ್ ಗೊತ್ತಲ್ಲಾ, ನೀನ್ ಕಣ್ ಕಣ್ ಬಿಡ್ತೀಯಾ'
'ವಿರಾಟಂಗೆ ಶಾಟ್ ಹೊಡದ್ರೇ ನೀನ್ ಬಾಯಿ ಬಾಯಿ ಬಿಡ್ತೀಯಾ'

'ನಿಮ್ಮಪ್ಪ ಯಾಕೋ ಬೈತಾವ್ನೇ ಏನವ್ನ ಕಷ್ಟ?'
'ಮೂರೊತ್ತು ಹಾಳ್ ಕ್ರಿಕೆಟ ಆಡಿ ಇವ್ನು ಕೆಟ್ಟ!'


ಕ್ರಿಶ್:

ಸುಯ್ ಸುಯ್ ಅಂತ ಬೋಲಿಂಗು
ಪಟ್ ಪಟ್ ಎಂದು ಬ್ಯಾಟಿಂಗು
ಮಂಜ ಸೀನ ಬದ್ರಿ ಶಂಕ್ರೀ
ಎಲ್ಲಾ ಬಾರಿಸವ್ರೆ ಬೌಂಡರೀ
ಪ್ರದೀಪ ಏನ್ ಹೊಡೆದ್ರೂ?
ಕಾಣಲಿಲ್ವಾ, ಆರೂ ಸಿಕ್ಸರ್ರು


ಪವಮಾನ :

ಬೊಂಬಾಟ್ ಆಗಿ ಕವನ ಬರಿದ್ರೇ ಸಾಲ್ದು ಕಣಲೇ
ಎಲ್ರು ಕೂಡಿ ಆಡುದ್ರೇನೆ ಮಜ ಕಣಲೇ
ಪಾಸ್ಟ್ ಬೊಲಿಂಗ್ ಸ್ಪಿನ್ ಬೋಲಿಂಗ್ ಎಲ್ಲಾ ಮಡ್ಗೀವ್ನಿ
ದಮ್ ಇದ್ರೆ ಬಂದ್ ನಿಂತ್ಕೊಂಡಾಡು ನೋಡ್ತೀನಿ
ಒತ್ತಾರೆದ್ದು ಡೆಸೆರ್ಟ್ ಬ್ರೀಜ್ ನಾಗ್ ಪಿಚ್ ಹಿಡಿತೀನಿ
ಅನಿಲ ಮಂಜ ಸಮಕ್ ಜೊತೆ ಕಾಯ್ತಿರ್ತೀನಿ..

Desert breeze is a park where there is a field to play.

ಪ್ರದೀಪ್:

ಸುಮ್ನೇ ನೋಡ್ತೀನಿ ಹಿಡಿತೀನಿ ಅಂತ ಕೂಗ್ಕೊಂಡ್ರೇ
ಬರೀ ದಮ್ಮು ಬಂದು ಒದ್ದಾಡ್ತೀಯಲೇ
ನಾನ್ ಪಿಚ್ ಮೇಲೆ ಕಾಲಿಟ್ರೇ ನೀನು ಪೆಚ್ಚಾಗ್ತೀಯಲೇ
ಶಾಟ್ ಹೊಡ್ದ್ರಂತು ನೀನು ಟೈರ್ಡು ರಿಟೈರ್ಡು
ಡೊಂಟ್ ವರಿ ಮಾಡ್ಕೋ ಬೇಡ
ಇನ್ನೂ ಚೆನ್ನಾಗಿ ಪ್ರಾಕ್ಟೀಸ್ ಮಾಡಮ್ಮ!



ಬಾಲ ಶಿವಾಜಿ


ಪ್ರಸಾದ್ ಸಾಮಕ

ನಾ ಶಿವಾಜಿಯೂ ಅಲ್ಲ
ಚೆನ್ನಮ್ಮನಂತೂ ಅಲ್ವೇ ಅಲ್ಲ
ಹೆತ್ತವರ ಕಲ್ಪನೆಗೆ ಕೊನೆಯೇ  ಇಲ್ಲ
ಈ ಭಾರದ ದಿರಿಸುಗಳ ಕಿತ್ತ್ಹೊಗೆಯುವವರೆಗೆ  ನನಗೆ ಶಾಂತಿಯೇ ಇಲ್ಲ

ಡಾ. ಗೀತಾ ಪಾಟೀಲ್:

ನನ್ನ ಆಶಯ..

ಕರುನಾಡು ಕನ್ನಡದ ಕಂಠೀರವ
ಹೊರಗೆಳೆದು ಝಳಪಿಸು ನಿನ್ನ ಆಯುಧವ
ಹಾರಿಸು ಬಾನಿಗೇರಿಸು ಕನ್ನಡ
ಕುಲಕೋಟಿಯ ಕೀರ್ತಿ ಪತಾಕೆಯ
ಕನ್ನಡದ ರಾಜಕುವರ..ನಿನಗಿದೋ
ಕೋಟಿ-ಕೋಟಿ ಶುಭಾಶಯ


ಪ್ರದೀಪ್ ಅವಧಾನಿ

ಎನಿತು ಪೂಜ್ಯಳೋ
ಎನ್ನ ತಾಯಿ
ಎನಿತು ಮಾನ್ಯಳೋ

ಮನು ಸಂತತಿಯ ಪೊರೆದು
ತನುವನೆ ತೊಟ್ಟಿಲಾಗಿಸಿ ತೂಗಿ
ನಾಗರಿಕತೆ ಮೆರೆದ ಭವ್ಯ ಭಾರತಿ
ಎನಿತು ಪೂಜ್ಯಳೋ
ಎನ್ನ ತಾಯಿ
ಎನಿತು ಮಾನ್ಯಳೋ

ಸ್ವಾಭಿಮಾನವೇ ವಿಂಧ್ಯಹಿಮಾಲಯವಾಗಿ
ಅವಳ ಪುಳಕವೇ ಗಂಗೆ ತುಂಗೆ ಯಮುನೆಗಳಾಗಿ
ಅವಳ ಸಿಂಗಾರವೇ ಹರಿದ್ವರ್ಣವನಸಿರಿಯಾಗಿ
ಎನಿತು ಪೂಜ್ಯಳೋ
ಎನ್ನ ತಾಯಿ
ಎನಿತು ಮಾನ್ಯಳೋ

ವೇದಘೋಷವೇ ಲಾಲಿಯಾಗಿ
ದೇವಾವತಾರಗಳ ಲಾಲಿಸಿ
ಧರ್ಮಗೀತೆಯ ಬೋಧಿಸಿ
ಕರ್ಮಯೋಗಿಗಳಾಗಿಸಿ
ಮುಕುತಿ ತೋರುವ ಜ್ಞಾನಭಾರತಿ
ಎನಿತು ಪೂಜ್ಯಳೋ
ಎನ್ನ ತಾಯಿ
ಎನಿತು ಮಾನ್ಯಳೋ

ಗುಪ್ತಗಾಮಿನಿ ಮೌರ್ಯರೂಪಿಣಿ
ಶಾತವಾಹನ ಚೋಳ ಚಾರಿಣಿ
ವಿಜಯನಗರ ಮಕುಟಧಾರಿಣಿ
ಯುಗಸಹಸ್ರ ರಾಜವಂಶ ಸಾಮ್ರಾಜ್ಯ ಲಕ್ಷ್ಮೀ
ಎನಿತು ಪೂಜ್ಯಳೋ
ಎನ್ನ ತಾಯಿ
ಎನಿತು ಮಾನ್ಯಳೋ

ದುರುಳರ ದಾಳಿಗೆ ನಲುಗಿ
ಜನ ನಿರ್ವೀರ್ಯತೆಗೆ ಸೊರಗಿ
ಆವರಿಸಿದ ಮೌಢ್ಯಕ್ಕೆ ಮರುಗಿ
ಬಳಲುತಿರುವ ಮಾತೆಯೇ
ಕೊರಗದಿರು ಕುಗ್ಗದಿರು
ಕಡೆಗೆಣಿಸಿದವರ ಕಣ್ತೆರಿಸಲು
ಕ್ಷಾತ್ರ ತೇಜ ಪುಂಜವಾಗಿ
ಧೀರಸುತರ ದೇವಾಂಶವಾಗಿ
ಕುದಿವ ರುಧಿರ ರೌದ್ರನಾಗಿ
ನಿನ್ನ ಸುಮಂಗಳ ಸೌಭಾಗ್ಯವ
ದಿಗ್ದಿಗಂತದಿ ಬೆಳಗಲೋಸುಗ
ಧರ್ಮ ದೀಕ್ಷೆಯ ರಕ್ಷೆ ಹೊತ್ತು
ಕರ್ಮವೆಂಬ ಕತ್ತಿ ಪಿಡಿದು
ಪುಟ್ಟ ಹೆಜ್ಜೆಯನಿಟ್ಟು ನಾನು
ನಡೆವೆ ಎನ್ನ ಆಶೀರ್ವದಿಸು
ತಾಯೆ ಎನ್ನ ಮುನ್ನಡೆಸು

ಕ್ರಿಶ್ ಕೃಷ್ಣಮೂರ್ತಿ:

ಬಾರ ತಮ್ಮ ಬಾರಾ
ಭಾರತಮ್ಮನ ನೋಡಾ!

ಕಾಯ್ದ ಮನಗಳ
ತೊಯ್ದ ಮಳೆಯನು
ಹಾಯ್ದ ಮಲೆಗಳ
ನೇಯ್ದ ಧರ್ಮದ

ಬಾರ ತಮ್ಮ ಬಾರಾ
ಭಾರತಮ್ಮನ ನೋಡಾ!

ವರ್ಷ ಸಹಸ್ರದ
ಸ್ಪರ್ಶ ಮಾಡುವ
ಹರ್ಷ ಮೂಡಿಸಿ
ಕರ್ಶ ಎಳೆತದ

ಬಾರ ತಮ್ಮ ಬಾರಾ
ಭಾರತಮ್ಮನ ನೋಡಾ!

ನಿದ್ದೆ ಹೋಗಿಸಿ
ಬುದ್ಧಿ ಎಬ್ಬಿಸಿ
ಗೆದ್ದೇ ಗೆಲುವೇ ನೀನೆಂದು
ಪ್ರದೀಪ ಬೆಳಗುವ

ಬಾರ ತಮ್ಮ ಬಾರಾ
ಭಾರತಮ್ಮನ ನೋಡಾ!


ದೇಶಭಕ್ತಿಯ ಮೊಂಬತ್ತಿಗಳು


ವಿದ್ಯಾ ಗದಗಕರ

ಎಳಸು ಮನಗಳ
ಮಿನುಗುವ ನಯನಗಳು.
ಸಾಟಿಯೇ ಸಾಟಿ
ಆ ಮಿಣುಕುವ ಎಸಳು ದೀಪಗಳಿಗೆ,
ಮುಂಬರುವ ಭರವಸೆಯ ನಾಳೆಗಳು
ದ್ಯೋತಕ ನಮ್ಮೀ ಮಾಗಿದ ಮನಗಳಿಗೆ


ಭಕ್ತವತ್ಸಲ ಆರ್.

ದೇಶಕ್ಕಾಗಿ ಪ್ರಾಣ
ತೆತ್ತ ಸೈನಿಕರೇ
ಓಹ್, ಇದೇನು
ನಿಮ್ಮ ಈ
ಬದುಕು.
ತಾನೇ ಉರಿದು ಕರಗುವ
ಮೊಂಬತ್ತಿಯ ಹಾಗೆ,
ಜಗಕೆಲ್ಲಾ ಕೊಡುತ್ತಾ
ಬೆಳಕು..

ಹೆತ್ತ ತಾಯಿಯ ಋಣಕ್ಕಿಂತ
ಇಲ್ಲ ಮಿಗಿಲು
ಎಂದರು, ದೊಡ್ಡವರು.
ಏಕೋ ಅನಿಸುತಿದೆ ಇಂದು
ನಿಮ್ಮ ತ್ಯಾಗ ಅದಕ್ಕಿಂತ
ಹೆಚ್ಚೆಂದು,
ನೀವು.. ತಾಯ್ನಾಡಿಗಾಗಿ
ಮಡಿವವರು!!

ಹೊಗೆ ಉಗುಳುವ ನಾಗ


ಕ್ರಿಶ್ ಕೃಷ್ಣಮೂರ್ತಿ

ಪಂಜೆ ಮಂಗೇಶರಾಯರ ಕ್ಷಮೆ ಕೇಳುತ್ತ...

ನಾಗರಹಾವೇ ಹಾವೊಳು ಹೂವೇ
ಗಾಡಿಯ ಕೊಳಲಲಿ ನಿನ್ನಯ ಠಾವೆ
ಬರೀ ಮೈ ಸಣ್ಣಗೆ ಮೊಗದಲಿ ಬಿಸಿ ಹೊಗೆ
ಎರಡೆಳೆ ನಾಲಗೆ ಇದ್ದರೂ ಸುಮ್ಮಗೆ
ಎರಗುವೆ ನಿನಗೆ ಈಗಲೆ ಆಕಡೆ
ಪೋ ಪೋ ಪೋ ಪೋ ಪೋ ಪೋ

ಭಕ್ತವತ್ಸಲ ಆರ್.

ಇರಲಿ ತೋರಿಸೋಣ ಅಂತ
ಸ್ವಲ್ಪ ದರ್ಪ..
ಹಾಕಿಸಿದೆ ಗಾಡಿಯ
ಹಿಂಭಾಗ ಸರ್ಪ..


ಇರಲಿಲ್ಲ ಯಾವುದೇ ಉದ್ದೇಶ
ಕೊಡಬೇಕು ಅಂತ ಸಂದೇಶ
ಆದ್ರೂ ಗೊತ್ತಿಲ್ದೆ, ಹೇಳ್ತಾ ಇದೆ..
ಹಾವು ಕಕ್ಕೋದು, ಗಾಡಿ ಉಗಿಯೋದು
ಎರಡೂ ವಿಷ, ವಿಷ!!! 

Thursday, July 13, 2017

Drinking from the saucer ಅನುವಾದ



_*Drinking From The Saucer*_
- John Paul Moore_

I've never made a fortune,
And I'll never make one now
But it really doesn't matter
'Cause I'm happy anyhow.

As I go along my journey
I'm reaping better than I've sowed
I'm drinking from the saucer
'Cause my cup has overflowed.

I don't have a lot of riches,
And the going's sometimes tough
But with kin and friends to love me
I think I'm rich enough.

I thank God for the blessings
That His mercy has bestowed
I'm drinking from the saucer
'Cause my cup has overflowed.

He gives me strength and courage
When the way grows steep and rough
I'll not ask for other blessings
For I'm already blessed enough.

May we never be too busy
To help bear another's load
Then we'll all be drinking from the saucer
When our cups have overflowed.

ಪ್ರದೀಪ್ ಅವಧಾನಿ

ಪದಾನುವಾದ

ನಾನೆಂದೂ ಗಳಿಸಿಲ್ಲ ಐಶ್ವರ್ಯ
ಮತ್ತು ಈಗ ಸಂಪಾದಿಸಲು ಕಾಣೆ
ಆದರೆ ಅದರ ಯೋಚನೆ ಬೇಕಿಲ್ಲ
ಏಕೆಂದರೆ ಹೇಗಿದ್ದರೂ ಸುಖಿ ನಾನೇ

ನನ್ನ ಈ ಪಯಣದಲಿ
ನಾ ಬಿತ್ತಿದ್ದಕ್ಕಿಂತಲೂ ಪಡೆಯುತಿರುವೆ ಹೆಚ್ಚು
ಬಟ್ಟಲಿಂದ ನಾ ಕುಡಿಯುತಿರುವೆ
ಏಕೆಂದರೆ ಅದು ತುಂಬಿ ತುಳುಕುತಿದೆ ಹೆಚ್ಚು

ನನ್ನ ಬಳಿ ಹೆಚ್ಚು ಸಂಪತ್ತಿಲ್ಲ
ಕೆಲ ಬಾರಿ ಹಾದಿ ಕಷ್ಟತಮವೇ ಸರಿ
ಆದರೆ ಪ್ರೀತಿಸುವ ಬಂಧು ಸ್ನೇಹಿತರಿರುವರೆಗೆ
ನಾ ಶ್ರೀಮಂತನೇ ಸರಿ

ಹರಸಿದ ಭಗವಂತನಿಗೆ ನಾ ಋಣಿ
ನೀಡಿರುವ ಅವನ ಕರುಣೆಯಿಂದ
ನಾ ಕುಡಿಯುತಿರುವೆ ಬಟ್ಟಲಿಂದ
ಅದು ತುಂಬಿ ತುಳುಕುವುದಾದ್ದರಿಂದ

ಅವ ಎನಗೆ ಶಕ್ತಿ ಧೈರ್ಯ ತುಂಬುವ
ಹಾದಿ ಕಡಿದಾಗಿ ಮತ್ತು ಒರಟಾದಾಗ
ಬೇರೆ ಹಾರೈಕೆಗಳ ಕೋರೆನು ನಾ
ತುಂಬು ಆಶೀರ್ವಾದ ನನಗಾಗಲೇ ಇರುವಾಗ

ನಾವಾರು ಅಷ್ಟೊಂದು ಬಿಡುವಿಲ್ಲದಂತಾಗುವುದು ಬೇಡ
ಇನ್ನೊಬ್ಬರ ಭಾರವ ಹೊರಲಾರದಷ್ಟು
ಆಗ ನಾವೆಲ್ಲರೂ ಬಟ್ಟಲಿಂದ ಹೀರುವೆವು
ಬಟ್ಟಲು ಹೆಚ್ಚೆಚ್ಚು ತುಂಬಿ ತುಳುಕಿದಷ್ಟು


ಪವಮಾನ ಹೊಳವನಹಳ್ಳಿ

ಭಾವಾನುವಾದ

ಗಳಿಸಿ ಕೂಡಿಡಲಿಲ್ಲ ಧನಕನಕ ವಸ್ತುಗಳ
ಗಳಿಸಲೊಲ್ಲೆನು ನಾನು ಇಂದು ಕೂಡ
ನೆಮ್ಮದಿಯ ಸುಖ ಎನಗೆ ಆಗಲೇ ಇರುವಾಗ
ಇಲ್ಲವೆನ್ನುವ ಕೊರತೆ ಎನ್ನಲಿಲ್ಲ

ಬದುಕಿನ ಪಯಣದಲಿ ಬಹುದೂರ ಸಾಗುತ್ತ
ಬಿತ್ತನೆಗೂ ಹೆಚ್ಚಾದ ಬೆಳೆಯ ಮೆದ್ದಿರುವೆ
ಎದೆಯ ಬಟ್ಟಲು ತುಂಬಿ ಆನಂದ ಉಕ್ಕುತಿರೆ
ಧನ್ಯತೆಯ ತಟ್ಟೆಯಲಿ ತುಂಬಿಟ್ಟು ಸವಿದೆ.

ಸಿರಿವಂತ ನಾನಲ್ಲ
ಕಷ್ಟ ಕಾರ್ಪಣ್ಯಗಳು ಇಲ್ಲವೆಂದಲ್ಲ
ಮನಸಾರೆ ಪ್ರೀತಿಸುವ ಇಷ್ಟ ಮಿತ್ರರು ಇರಲು
ನಾನಂತು ಬಡವನು ಅಲ್ಲವೇ ಅಲ್ಲ

ಶರಣೆಂದೆ ದೈವಕ್ಕೆ
ಕಾರುಣ್ಯಪೂರದ ಹೊಳೆಹರಿಸುದುದಕೆ
ಎದೆಯ ಬಟ್ಟಲು ತುಂಬಿ ಆನಂದ ಉಕ್ಕುತಿರೆ
ಧನ್ಯತೆಯ ತಟ್ಟೆಯಲಿ ತುಂಬಿಟ್ಟು ಸವಿದೆ

ಬಾಳ ಹಾದಿಲಿ ನೂರು ಕಲ್ಲು ಮುಳ್ಳುಗಳು
ಇದ್ದರೂ ಕೊಡುತಿರುವೆ ಶಕ್ತಿ ಚೈತನ್ಯಗಳು
ಬೇಕಾದ ವರಗಳನೆ ನೀನಿತ್ತು ಸಲಹಲು
ಬೇರೆ ಬಿನ್ನಪಗಳ ನಾನರಿಯೆನು

ಜೀವನದ ಜಂಜಾಟ ನಿರತವಾಗಿದ್ದರೂ
ನಮ್ಮೆಲ್ಲ ಭಾವಗಳು ಸ್ಪಂದಿಸುತ್ತಿರಲಿ
ಎದೆಯ ಬಟ್ಟಲು ತುಂಬಿ ಆನಂದ ಉಕ್ಕಿಸುತ
ಧನ್ಯತೆಯ ತಟ್ಟೆಯಲಿ ತುಂಬಿಟ್ಟು ಸವಿಯುವ

ಆಡ್ತೀರಾ ಕುಂಟೆ ಬಿಲ್ಲೆ


ಪ್ರಸಾದ್ ಸಾಮಕ

ಡಾ. ಗೀತಾ ಪಾಟೀಲ್

ಪ್ರದೀಪ್ ಅವಧಾನಿ

ಅವ್ವಾ! ಎಷ್ಟು ಚೆಂದ ನಿನ್ನೊಡನಾಟ!
ಸ್ಫೂರ್ತಿ ತರುವ ಜೀವನ ನೋಟ

ಮೋಸಗೊಳಿಸುವ ವಯಸು
ಅದನೆಣಿಸದ ಲವಲವಿಕೆಯ ಮನಸು

ಬಿಗುಮಾನ ದಾಕ್ಷಿಣ್ಯ ಅಂಜಿಕೆ
ಅವುಗಳ ಲಕ್ಷ್ಯವೇತಕೆ?

ಜೀವನೋತ್ಸಾಹಕ್ಕಿಲ್ಲ ಎಲ್ಲೆ
ಆಡಲು ಸೈ ಕುಂಟೆ ಬಿಲ್ಲೆ

ದಾವಣಿಯ ದಿನಗಳ ಮೀರಿಸುವ ಹುರುಪು
ಹೃದಯ ಕುಪ್ಪಳಿಸಲು ಸ್ಪಂದಿಸುವ ಮನಸು

ಹಿರಿಹಿಗ್ಗುವ ಸಿರಿವಾಸಂತಿ
ಸುಗ್ಗಿ ತರುವ ಕಣ್ಣಕಾಂತಿ
ಪ್ರತಿದಿನವಾಗಿದೆ ಸಂಕ್ರಾಂತಿ

ಅವ್ವಾ! ಎಷ್ಟು ಚೆಂದ ನಿನ್ನೊಡನಾಟ!
ಸ್ಫೂರ್ತಿ ತರುವ ಜೀವನ ನೋಟ


ಭಕ್ತವತ್ಸಲ ಆರ್.

ಹರೆಯದ ಹುಡುಗರು ಎಲ್ಲಾ
ನಾಚಿ ನಿಂತರೂ ನೋಡಿ,
ನರೆಯ ನೆರಿಗೆಗಳ್ಳೆಲ್ಲಾ
ನಿಮಗಾವ ಲೆಕ್ಕ ಬಿಡಿ.

ಬದುಕಿನೆಡೆಗೆ ಇರುವ,
ನಿಮ್ಮ ಈ ಒಲುಮೆ
ಹಿಮತಟದ ನದಿಯಂತೆ
ಎಂದೂ ಬತ್ತದ ಚಿಲುಮೆ!!

ದಿನವೂ ಹೊಸತನ..
ಇದ್ರೆ ಎಂದೂ..ಜೀವನ
ಅರಿತೆವು ನಾವಿಂದು, ಮನಸಿಗೆಂದಿಗೂ
ಬಾರದು ಮುದಿತನ!!


ಕ್ರಿಶ್ ಕೃಷ್ಣಮೂರ್ತಿ

ದೊಡ್ಡಮ್ಮನಾ ಚಿತ್ರ ಸ್ಪೂರ್ತಿಯ ತಂದಿತಾ
ಮಾಡುವೆನು ನಾನೂ ಕಸರತ್ತು ಖಂಡಿತಾ
ಚಡ್ಡಿ ಟೀಶರಟು ಹಾಕಿ ಓಡಿದೆನು ಪಾರ್ಕಿಗೆ
ಬಾಸ್ಕೆಟ್ ಬಾಲ್ ಆಡುವ ಗಟ್ಟಿನೆಲ ಕೋರ್ಟಿಗೆ

ತಟ್ಟುತ್ತ ಓಡುತ್ತ ಎಸೆದೆ ಆ ಬುಟ್ಟಿಯತ್ತ
ಬಾಲ್ ಹಿಂತಿರುಗಿದರೂ ಜೋರು ನನ್ ಥಕಧಿಮಿತಾ
ಹದಿನೈದು ನಿಮಿಷದಲಿ ಧಾವಿಸಿದೆ ಮನೆ ಕಡೆಗೆ
ಬೆನ್ ಸೊಂಟಕ್ಕೆ ಹಚ್ಚಲು ಜಂಡೂಬಾಂಬ ಬೆಂಗೇ

ಎಮ್ಮೆ ತಮ್ಮಣ್ಣ


ಕ್ರಿಶ್ ಕೃಷ್ಣಮೂರ್ತಿ

ಟ್ವೇನ್ ಟಿ ಪೋರ ಸೆವೆನ್
ದುಡಿದು ದಣಿದ ನಿಷ್ಠನವನ್
ಚಿತ್ರಗುಪ್ತನಿಗೂ ಬೇಕು
ಹತ್ತು ನಿಮಿಷ ನಿದ್ರೆ ಬ್ರೇಕು!

ನಿಜವೀ ವಾಹನ ಯಮಧರ್ಮನಾ ಎಮ್ಮೆ
ನನ್ನ ಪಯಣಕೆ ಬಿಟ್ಟು ಕೊಡುವವ ಒಮ್ಮೊಮ್ಮೆ
ಮಹಿಷ ಓಡುವ ವೇಳೆ ಹಿಡಿ ಗಟ್ಟಿ ಕೊಂಬ
ಮರೆಯಬಾರದು ನಾಳೆ ಒಂದೆರಡು ದಿಂಬ

ಪ್ರಸಾದ್ ಸಾಮಕ

ಜಗದ್ಭ್ರಮೆ

ತಿಳಿದಿದೆಯೆನಗೆ ಈ ಜಗತ್ತಿನ ಭ್ರಮೆ
ತಿಳಿದವರೂ ಕರೆವರೆನ್ನ ಕರಿ ಎಮ್ಮೆ
ತೋರುವರು ಅಸಡ್ಡೆಯ ನೋಟವನೊಮ್ಮೆ
ತೆಗಳುವರಿವನೇನೇನೋ ಮಗದೊಮ್ಮೆ

ತಿಳಿದಿದೆಯೇ ನಾನೋರ್ವ ಹಾಲಿಡದ ಕೋಣ
ತೋರಲಿಲ್ಲೆನಗೆ  ಹುಲ್ಲಿಟ್ಟು ನೀರಿಡುವ  ತಾಣ
ತಾರಕನಿವ ತಳಿದ ಕಟ್ಟಿಗೆಯ ಹುಡುಕುವ ದ್ರೋಣ
ತ್ರಾಣಕ್ಕೆ ತುತ್ತಿಟ್ಟು ದುಡಿದ ಬೆನ್ನನೊತ್ತುವ ಜಾಣ





ಪುಟ್ಟ ಭಿಕ್ಕು


ಪ್ರದೀಪ್ ಅವಧಾನಿ

*ಪುಟ್ಟ ಸ್ವಾಮಿ ಧ್ಯಾನ*

ಕ್ಷಣಕೊಮ್ಮೆ ಅದು ಬೇಕು, ಇದು ಬೇಕು
ಎನ್ನುತಾ ಅಮ್ಮನನ್ನು ಸತಾಯಿಸಲು
ಸಾಕಾಯ್ತು ಅಮ್ಮನಿಗೆ ನನ್ನ ಹಟದ ವರ್ತನೆ
ಅದಕೆಂದಳು ಮಾಡು ದೇವರಲ್ಲಿ ಪ್ರಾರ್ಥನೆ
ನಿನಗೆ ಬೇಕಿದ್ದೆಲ್ಲವನೂ ಕೊಡುವನವನೊಬ್ಬನೇ!

ಕೈ ಜೋಡಿಸಿ ಮುಗಿದಿದ್ದಾಯ್ತು
ಊದುಬತ್ತಿ ಹಚ್ಚಿದ್ದಾಯ್ತು
ಸುಮ್ನೇ ಟೈಂ ವೇಸ್ಟಾಯ್ತು
ಆ ಆಸಾಮಿ ಪತ್ತೆಯಿಲ್ಲ, ನನ್ನಾಸೆ ತೀರಲಿಲ್ಲ!

ಅಮ್ಮಾ,
ನೀನು ಹೇಳಿದ್ದೆಲ್ಲಾ ಮಾಡಿದೆ
ಪುಟ್ಟ ಹುಡುಗ ನಾನು
ಪುಟ್ಟ ಪ್ರಾರ್ಥನೆ ಮಾಡಿದೆ
ಫಲವನೇನೂ ಕಾಣೆ ಎಂದು ನಾನು ದೂರಿದೆ

ನನ್ನ ಸಪ್ಪೆ ಮೋರೆ ನೋಡಿ
ಅಮ್ಮನೆಂದಳು -
ಸಾಕು ಮಾಡು ಕಂಪ್ಲೇಂಟು
ನಿನ್ನ ಲಿಸ್ಟು ದೊಡ್ಡದುಂಟು
ಗೊತ್ತವನಿಗೆ ನಿನ್ನ ಸ್ಟಂಟು
ತುಂಬಾ ಬೇಕು ಕಮಿಟ್ ಮೆಂಟು!

ಬೇರೆ ಎಲ್ಲೂ ಬೇಡ ಗಮನ
ಬುದ್ದನಂತೆ ಮಾಡು ಧ್ಯಾನ
ಶ್ರದ್ಧೆಯಿಂದ ಬೇಡಿದಲ್ಲಿ
ಸಿಗುವುದೆಲ್ಲಾ ನಿನಗೆ ಜಾಣ

ಒಲ್ಲದ ಮನದಿಂದ ನಾನು
ಇದೂ ಟ್ರೈ ಮಾಡೋಣವೆಂದು
ಉಟ್ಟು ಸಾಧು ಬಟ್ಟೆಯನ್ನು
ಜಪಮಾಲೆ ಕೈಲಿ ಹಿಡಿದು
ಕೂತೆ ಧ್ಯಾನ ಮಾಡಲು

ಕಷ್ಟವಪ್ಪ ಕಣ್ಣು ಮುಚ್ಚಿ ಕೂಡಲು
ಇರಬಾರದೇ ಏನಾದರೂ ಚಪ್ಪರಿಸಲು
ಎಷ್ಟು ಚೆನ್ನಿತ್ತು ಚಾಕಲೇಟು ಜಪಮಾಲೆ ಇದ್ದಿರಲು
ಹೀಗೆಯೇ ಎಷ್ಟೊಂದು ಯೋಚನೆ ಕಾಡಲು

ಹೊಟ್ಟೆ ಹಸಿವೆಂದು ಚುರುಗುಟ್ಟಿತು
ಧ್ಯಾನವಂತೂ ಸಾಕು ಸಾಕೆನಿಸಿತು
ಆಗ ತಟ್ಟನೆಂದು ವಿಷಯವೊಂದು ಹೊಳೆಯಿತು
ಕೇಳಿದ್ದೆಲ್ಲಾ ಕೊಡುವ ಅಮ್ಮನಿರಲು
ದೇವರೇಕೆ? ಧ್ಯಾನವೇಕೆ?

ಅಮ್ಮನೆಡೆಗೆ ಓಡಿದೆ
ಅಮ್ಮನಪ್ಪಿ ಹಸಿವು ಎಂದು
ಜೋತು ಮೋರೆ ಹಾಕಿದೆ

ಮುದ್ದು ಮುಖವ ನೋಡಿ
ಅಮ್ಮ ನಸುನಕ್ಕಳು
ನನ್ನನಪ್ಪಿ ಎತ್ತಿಕೊಂಡು ಮುತ್ತನಿಟ್ಟಳು
ಉಪ್ಪು ತುಪ್ಪದನ್ನ ಕಲಿಸಿ ತುತ್ತನಿಟ್ಟಳು


ಪ್ರಸಾದ್ ಸಾಮಕ

ಅಮ್ಮನೆಂದಳು ಮದರ್ಸ್ ಡೇ
ನೀನಿರಬೇಕು ನಿಮ್ಮಪ್ಪನ ಕಡೆ
ಅವನಿಗೋ ಚಿತ್ರ ಹಿಡಿವ ಖಯಾಲಿ
ಸುತ್ತಿದ ನನ್ನ ಅಲ್ಲೇ ಬಿದ್ದ ಕಾವಿಯಲಿ
ಕೊಟ್ಟನೊಂದು ಮಣಿ ಸರಮಾಲೆ
ಪಠಿಸೆನ್ದ ಅಮ್ಮ ಕಲಿಸಿದ ಅಕ್ಷರಮಾಲೆ !


ವಿದ್ಯಾ ಗದಗಕರ

ಮಗುವೇ!
ಯಾರು ಹಾಕಿದರು ಈ ಕಾವಿ
ಯಾರು ಕೊಟ್ಟರು ಈ ಜಪಮಾಲೆ
ಸುಕೋಮಲ ಮನಕ್ಕಿದು ಅಲ್ಲವೆ ಸಂಕೋಲೆ

ಅರಿವಿಗೆ ಬರುವ ಮುನ್ನ
ಮಾಡಿಸಿದ ಈ ಧ್ಯಾನದ ಪ್ರಯತ್ನ
ಇದಲ್ಲವೇ 'ಬಲವಂತದ ಮಾಘ ಸ್ನಾನ'

ನಿರ್ಮಲ ಮನಸ್ಸದು
ದೇವ ಸ್ವರೂಪ
ಆಟವಾಡುವ ವಯಸ್ಸಿದು
ತಟ್ಟದು ಪಾಪದ ಲೇಪ
ಮಾರ್ದನಿಸಲಿ
ಸ್ವಚ್ಚಂದ ಹಕ್ಕಿಯ ಆಲಾಪ


ಪ್ರಕಾಶ್ ಜೋಶಿ

ಏಕಾಗಲಾರೆ ನಾನೂ ಬುದ್ಧ
ಆಗಬೇಕಿದೆ ನಾನೂ ಪ್ರಹ್ಲಾದ

ಜಪತಪವ ಮಾಡುವೆ
ಕಾಷಾಯವ ಧರಿಸುವೆ
ಧ್ಯಾನದಲ್ಲಿ ಕೂಡುವೆ
ಅಂತರಾಳಕ್ಕೆ ಜಿಗಿಯುವೆ

ಮೂರ್ತಿ ಚಿಕ್ಕದಾದರೇನು
ಆತ್ಮಶಕ್ತಿಗಳತೆ ಇದೆಯೇ
ಮಾರ್ಕಂಡೇಯ ಧ್ರುವರಿಲ್ಲವೇ
ಭಾರತಿಯ ಮಡಿಲಿನಲ್ಲಿ
ಸದುಪಮೆಗೊಂದು ಸೀಮೆ ಇದೆಯೇ ?

ಕ್ರಿಶ್

ಶಂಕರ ಎಂಟುವರ್ಷದ ಮೊದಲೇ
ಶುಕನೋ ತಾಯಿ ಉದರದಲ್ಲೇ
ಪಡೆದರಿವರೆಲ್ಲ ಪರಮ ಬ್ರಹ್ಮ ಜ್ಞಾನವ
ಬಾಲ್ಯದಿ ಬೆಳಗಿದ ದಿವ್ಯ ಚೇತನವ
ಜೋಷಿಯವರ ಕವನದಲ್ಲಿದೆ ವೇದಾಂತ
ಖುಷಿ ಕೊಟ್ಟು ಎಮ್ಮ ಮೆರೆಸುವ ಸಿದ್ಧಾಂತ

ಕುದುರೆಯೊಡನೆ ಚದುರೆ


ಪ್ರದೀಪ್ ಅವಧಾನಿ

ಆಗೆಲ್ಲಾವೀರಾಧಿವೀರರು
ಅಧಿಪತ್ಯ ಸಾರಲು
ನಡೆಸಿದ್ದು ಅಶ್ವಮೇಧ!

ಈಗ ಹರೆಯದ ತರುಣಿ
ತನ್ನ ಅಧೀನದಲ್ಲಿ ವಿನೋದವಾಗಿ
ನಡೆಸಿದ್ದು ಅಶ್ವಮೋದ!

ಡಾ. ಗೀತಾ ಪಾಟೀಲ್

ಪ್ರೀತಿಯ ರೀತಿ....

ಮುನ್ನೀಡಿದ ಮುಂಗಾಲುಗಳ ಮೇಲೆ
ಮನಸ್ಸು ಮೋರೆಯಿಟ್ಟ ರೀತಿ
ಪಿಸುಮಾತಿನ ಕುದುರೆಯ ಹತ್ತಿ
ಕನಸುಗಳು ಕಾಡಿದ್ಹಾಂಗೆ ಭ್ರಾಂತಿ

(ಅ)ಇದುವೇ...
ಚೆಂದದ ಚೆಲುವಿನ,
ಏಳು ಮಲ್ಲಿಗೆ ತೂಕದವಳ ಪ್ರೀತಿ.....


ವಿದ್ಯಾ ಗದಗಕರ

ಹಸನಾದ ಹಸಿರಿನ ಹಿನ್ನೆಲೆಯಲ್ಲಿ
ಹದಿ ಹರೆಯದ ಹುಡುಗಿಯೊಂದು
ಹಯ-ವದನದ ಹುಳಿರಿನ
ಹದವರಿತು
'ಹಾಯ್' ಹೇಳುವ ಪರಿಯೇ ಚೆಂದ!


ಪವಮಾನ ಹೊಳವನಹಳ್ಳಿ

ನಗು ಮೊಗದ ನೀರೆಗೂ
ಮಿರುಗುವಾ ಕುದುರೆಗೂ
ಹೀಗೊಮ್ಮೆ ನಡೆದಿತ್ತು
ಮೌನ ಸಲ್ಲಾಪ

ಕೆನೆಯುತ್ತ ಮೇಲ್ ನೆಗೆದು
ಮುಂಗಾಲು ಭುಜದಲ್ಲಿ ಇಳಿಬಿಟ್ಟು
ಬಿಟ್ಟ ಕಣ್ಣೋಟದಲಿ ತುರಗ ನುಡಿದಿತ್ತು

ಹಲ್ಲಣದಿ ನಾ ನಿಲ್ಲೆ
ಹುರುಳಿಯನು ನಾ ಮೆಲ್ಲೆ
ನೀನಲ್ಲದನ್ಯ ರಾವುತನ ನಾನೊಲ್ಲೆ
ಬಿಟ್ಟು ನೀ ಹೊರಡದಿರು ಎನ್ನನಿಲ್ಲೇ.

ಇಂಗಿತವ ಮನವರಿಸಿ ಬೆನ್ನನ್ನು ನೇವರಿಸಿ
ಸಂತೈಸಿ ನುಡಿದಳಾ ಮೈಯ ಸಾವರಿಸಿ

ಹೋಗುವೆನೆ ಅಂದರೂ ಹೋಗುವುದು ನಾ ಎಲ್ಲಿ
ನೀನಲ್ಲದೆ ಎನಗೆ ತಾಣವೆಲ್ಲಿ, ಬದುಕುವ ತ್ರಾಣವೆಲ್ಲಿ.
ಜನ್ಮಾಂತರದ ನಂಟು ಜನುಮ ಜನುಮಕು ಉಂಟು
ಜೊತೆಗೂಡಿ ಪಯಣಿಸಲು ಬಹುದೂರ ಉಂಟು

(ಹಲ್ಲಣ - ಜೀನು, ಕುದುರೆಯ ಮೇಲೆ ಹಾಕುವ ಚರ್ಮ ಸಾಧನ)

Wednesday, July 12, 2017

ಬೈಕನೇರಿದ ನಾರಿ


ಡಾ. ಗೀತಾ ಪಾಟೀಲ್

ಸ್ವಾಭಿಮಾನಿ ಸ್ವಾವಲಂಬಿ ನೀನು....

'ನೀ ಬರೇ ಅಡುಗೆ ಮನೆಗೆ ಮಾತ್ರ ಸೀಮಿತ' ಎಂದವ್ರಿಗೆ
ನೀನಿಟ್ಟು ತೋರಿಸಿದೆ ದಿಟ್ಟ ಹೆಜ್ಜೆಯ ಬಲು ಚಂದಾಗೆ

ನಿನಗೆ ನೀನೇ ಬದಲಾದೆಯಲ್ಲ ಸದ್ದಿಲ್ಲದೆ
ನಾನಿಂದು ಸ್ವಾವಲಂಬಿ ಎಂದು ತೋರಿಸಿದೆ ಎದೆಗುಂದದೆ

ಎಲ್ಲವನ್ನೂ ಮೀರಿ ಬೆಳೆಯುತ್ತಿದ್ದೀಯಲ್ಲ ನೀನ್ನೀನೆ
ಚಂದ್ರಲೋಕಕ್ಕೂ ಕಾಲಿಟ್ಟು ಬಂದೆ ಅಲ್ಲೇನೇ?

ತಾಯಿ, ತಂಗಿ, ಮಡದಿ ಎಂಬೆಲ್ಲ ಪಾತ್ರಗಳನ್ನು ನಿರ್ವಹಿಸುವೆ
ಸಂಬಂಧಗಳ ಸರಮಾಲೆಯನ್ನೇ ತೊಟ್ಟು ನಿಂತಿರುವೆ

ಇದೀಗ ಜಗದಗಲ ಮೂಡಿದೆ ಛಾಪು ನಿನ್ನದು
'ಓ ಇವಳಾ' ಎಂದವರಿಗೆ ಈ ಉತ್ತರ ಸಲ್ಲುವುದು


ವಿದ್ಯಾ ಗದಗಕರ

ಗೆಣಕೇರು ಪ್ಯಾಟೆಗೆ ಹೊಂಟಾರು
ಪಟಾಪಟಿ ಗಾಡಿಯ ಹೊಡೆದಾರು
ಚೆಲುವಾದ ದಾಗಿನವ ಇಟ್ಟಾರು
ದೇಸೀಯ ಉಡುಗಿ ತೊಟ್ಟಾರು
'ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ' ಂ
ಎಂದವರ ಕುಲದವರು
ಹೇಳಿಕೆಯ ತೊಡೆದು ಹೊಂಟವರು
ನನ್ನ ಹೆಮ್ಮೆಯ ನಾರಿಯರು
ಗೆಣಕೇರು ಪ್ಯಾಟೆಗೆ ಹೊಂಟಾರು
ಪಟಾಪಟಿ ಗಾಡಿಯ ಹೊಡೆದಾರು


ಕ್ರಿಶ್ ಕೃಷ್ಣಮೂರ್ತಿ

ಜೊತೆ ಜೊತೆಯಲ್ಲಿ

ಮಳ್ಳಿ ನಿನಗೇನು ಗೊತ್ತೆಂದು
ಇಳೆಯ ಮೂಲೆಗೆ ತಳ್ಳಿ
ಹಳಿದ ಶಾಣ್ಯರ ಧನಿಯು
ಕೇಳಿಸದು ಇಲ್ಲಿನ್ನೆಂದೂ

ಎಲ್ಲವನು ಸಾಧಿಸುತಾ
ಜಯಭೇರಿ ಹೊಡೆಯುತಾ
ನೀ ನುಡಿದೆ ಗಂಡಿಗೆ
ಇಲ್ಲಿ ನೋಡಾ ಮೂಢಾ

ದುಡಿಯುತಾ ಪೊರೆಯುತಾ
ಕಲಿಸುತಾ ನಲಿಸುತಾ
ಮುಂದೆ ಸಾಗುವ ನಿನಗೆ
ಒಂದು ಕಿರು ಬಿನ್ನಹಾ

ಮುಂದಿನಾ ಪಯಣದೊಡೆ
ಉನ್ನತಿಯ ಹಾದಿಯೆಡೆ
ಗಂಡಿಗೂ ನೀ ಕೊಡಾ
ಭರದ ಡಬ್ಬಲ್ ರೈಡಾ!


ಪ್ರದೀಪ್ ಅವಧಾನಿ

ಶರ್ಟು ಪ್ಯಾಂಟು ಮಾತ್ರ
ಬೈಕು ಏರಿದ್ದನ್ನು ನೋಡಿದ್ದ ಜನ
ನಿಬ್ಬೆರಗಾಗಿ ದಿಟ್ಟಿಸಿದರು
ಶತ ಶತಮಾನಗಳಿಂದ ಬಂದ
ಸೀರೆ ಉಟ್ಟ ನೀರೆ
ಮೊನ್ನೆಯಷ್ಟೇ ಬಂದ
ಬೈಕು ಏರಲು!
ಝಾನ್ಸಿ ರಾಣಿಯಂತೆ
ವಿಜೃಂಭಿಸಿದ​ಳು!

ಓದು ಬರಹ ನಿನಗೇಕೆ ಬೇಕು?
ಮದುವೆ ಮನೆಗೆಲಸವಷ್ಟೇ ಸಾಕು
ಎಂದು ಮೂದಲಿಸಿದ ಸಮಾಜದ
ಸೋಗುಲಾಡಿತನವನ್ನು ಧಿಕ್ಕರಿಸಿ
ಸಂಪ್ರದಾಯ ಶೃಂಖಲೆಯ ಕಿತ್ತೆಸೆದು
ಕಿತ್ತೂರು ಚೆನ್ನಮ್ಮನಂತೆ
ಕಂಗೊಳಿಸಿದಳು!

ಸುಲಭವಲ್ಲ ಈ ಜೀವನಮಾರ್ಗ
ಎಷ್ಟೊಂದು ಸಾಮಾಜಿಕ ನ್ಯೂನತೆಗಳು
ಕೆಟ್ಟ ರಸ್ತೆಯ ಹಳ್ಳ-ಹೊಂಡಗಳು
ಇದ್ದರೇನಂತೆ, ಹತ್ತಿರುವೆ ಹೊಂಡಾ ಬೈಕು
ಕೀಳ್ಮನಸ್ಸಿನ ಕಿಂಡಿಯಿಂದ ಹೊರ ಬರುವ
ವಿವಿಧ ವೈಪರೀತ್ಯಗಳ ಸದೆಬಡಿದು
ಒನಕೆ ಹಿಡಿದಷ್ಟೇ ಸಲೀಸಾಗಿ
ಬೈಕು ಹಿಡಿದು
ಓಡಿಸಿದ ಓಬವ್ವನಂತೆ
ಆರ್ಭಟಿಸಿದಳು!

ಅಂದು ಅಬಲೆಯೆಂದ ಜನ
ಇಂದು ಭಲೇ! ಭಲೇ!


ಜೋಡಿ ಬರೆದ ಕವನ


ಯಶವಂತ ಗದ್ದಿ

ಕಳ್ಳುಕುಡಿದ ಕೋಡಗವೊಂದು ಕನ್ನಡಿಯನು ಹಿಡಿದಿದೆ
ಕಂಡವನಾರೋ ಕುರೂಪಿಯೆಂದು ಕುಹಕವನು ಮಾಡಿದೆ

ಪವಮಾನ ಹೊಳವನಹಳ್ಳಿ

ಹಾಡುವ ಭರದಲಿ ಗರ್ದಭ ರಾಗಾಲಾಪಾಲವ ಮಾಡಿದೆ
ಹಾಡುವ ಕೋಗಿಲೆ ಶ್ರುತಿ-ತಪ್ಪಿತೆಂದು ವ್ಯಂಗ್ಯವನಾಡಿದೆ ।। ೧ ।।

ಮಿಂಚುತ ಮಿಂಚುಳ ಇರುಳಲಿ ಸಣ್ಣಗೆ ಬೆಳಕನು ಚೆಲ್ಲುತಿದೆ ।
ಸೂರ್ಯನ ಕಿರಣವು ಸಮವಲ್ಲವೆಂದು ಗರ್ವದಿ ಬೀಗುತಿದೆ ।।೨।।

ಉಡಿಯಲಿ ಉಗ್ರರ ಸಾಕುತ ಪಾಕಿಯು ಬಾಂಬನೇ ಸ್ಪೋಟಿಸಿದೆ ।
ಶಾಂತಿಯ ಪಾಠವ ಹಾಡಲು ವಿಶ್ವಕೆ ಬೋಧನೆ ಮಾಡಿದೆ ।। ೩।।

ಬುದ್ದಿಯ ಬಲದಲಿ ಸಿದ್ದಿಯ ನೆಪದಲಿ ಮನುಕುಲ ನಡೆದೀದೆ ।
ಭಾವದ ಶುದ್ದಿಯ ಕಳೆಯುತ ಸೃಷ್ಟಿಯ ಕರ್ತನ ಮರೆತೀದೆ ।। ೪।।

ಮಾವು ನಾವು


ಪವಮಾನ ಹೊಳವನಹಳ್ಳಿ

ನಾವು ಗೆಳೆಯರು ನಾವು ಎಳೆಯರು
ಮುಗ್ಧ ಮನಸಿನ ಚಿಣ್ಣರು
ಪ್ರಕೃತಿ ಮಡಿಲಲಿ ಬೆಳೆದ ಜಾಣರು
ನಾವು ಮಾವಿನ ಪ್ರಿಯರು ।।೧|।

ಕಲೆತ ಮಾವಿನ ಹಣ್ಣಿನಂದದಿ
ಕಂಗೊಳಿಪ ರಸಪೂರರು
ಹಂಚಿ ತಿನ್ನುವ ಶಾಂತಿಪಾಠವ
ಹಾಡುವಾ ಹರಿಕಾರರು, ನಾವು ಮಾವಿನ ಪ್ರಿಯರು ।।೨।।

ಮಾವು ಸಿಹಿಯನೇ ಹೋಲುವಂಥ
ಮುದ್ದು ಮಾತಿನ ಪೋರರು
ನೂರು ಕನಸನು ಮನದಿ ಹೊತ್ತಾ
ಭಾವಿ ಭಾರತ ಪೌರರು, ನಾವು ಮಾವಿನ ಪ್ರಿಯರು ।।೩।।


ಕ್ರಿಶ್ ಕೃಷ್ಣಮೂರ್ತಿ

ಗೋಲಿ ಬುಗುರಿ ಚಿನ್ನಿ ಗೋಲ
ಆಡಿ ಓಡಿ ದಣಿದು ನಿಂದು
ಮರದ ಮೇಲೆ ಬೀರಿ ಕಲ್ಲ
ಬಿದ್ದ ಕಾಯ್ಗಳೆತ್ತಿ ಕೊಂಡು

ಒದರಿಕೊಂಡು ಊದಿ ಮಣ್ಣ
ಅಂಗಿಯಿಂದ ಒರೆಸಿಕೊಂಡು
ಎಲ್ಲ ಸೇರಿ ಪಡೆದ ಹಣ್ಣ
ಬೆವರ ಮರೆತು ಸವಿದು ತಿಂದು

ನಾವೆಂದಿಗೂ ಜೊತೆಯಲೆಂದು
ಪ್ರಾಣಮಿತ್ರ ರೆಂದು ತಿಳಿದು
ಯಾರು ಅಂದುಕೊಂಡರಂದು
ಮತ್ತೆ ಎಂದೂ ಸಿಗೆವು ಎಂದು?


ನರ - ವಾನರ


ಪವಮಾನ ಹೊಳವನಹಳ್ಳಿ

ಪಡುಮಡುವೆ ಎನ್ನ ಶಿರ ಜೋಡಿಸುವೆನೆನ್ನ ಕರ |
ನಾ ನಿನ್ನ ಪರಿವಾರ ಸಲಹಯ್ಯ ವಾನರ ||

ನಂಜನೆಲ್ಲವ ತರಿಯೊ ಅಂಜಿಕೆಯ ನೀ ಕಳೆಯೋ |
ಅಂಜನಾ ವರಸುತನೆ ಧೀರ ಸಂಜೀವ ||

ಕುಹಕವಿಲ್ಲದ ಮಾತು ಕೆಡಕನೆಣಿಸದ ಮನವ |
ತವಕದಿಂದಲಿ ನೀಡೋ ಶ್ರೀರಾಮ ಸೇವಕ ||

ಬಿಟ್ಟಿರುವೆ ಸತಿಸುತರ ತೊಟ್ಟಿರುವೆ ಕಾವಿಸರ |
ಇಷ್ಟಾದರೂ ಬಿಡದು ಮನದ ಶ್ರೃಂಗಾರ ||

ಕೊಟ್ಟೆಯಾದರೆ ಮನಕೆ ಭಕ್ತಿಭಂಡಾರ |
ಮೆಟ್ಟಿ ನಿಲ್ಲುವೆ ನಾನು ಸಂಸಾರಸಾಗರ||

ಪ್ರದೀಪ್ ಅವಧಾನಿ

ಧರಣಿಯೊಳಗೆಲ್ಲವನು ಮೆಟ್ಟಿನಿಂತಿಹೆನೆಂದು
ಬೀಗುವ ಮಾನವನ ಮನವು ಮಹಾ ಮರ್ಕಟ

ಮಿಕ್ಕೆಲ್ಲವು ನನಗಾಗಿ, ನಾ ಶ್ರೇಷ್ಟನೆನುವ ಭಾವ
ಆಗಿದ್ದನಲ್ಲವೇ ನರ ಮುಂಚೆ ತಾ ವಾನರ

ಕಲ್ಲುಗಳ ಕೊಂಡಾಡಿ ಕಾಯಲು ಬೇಡುವ ದೀನನಿವ
ಕಲ್ಲುಸಕ್ಕರೆ ಬಯಸಿದ ಕಪಿಯೆಡಗೆ ಕಲ್ಲು ಬೀರುವ

ಅಹಂಕಾರವ ಬಿಟ್ಟವಗೆ ಮೂಡುವುದು ಅರಿವು
ಚರಾಚರ ಜೀವಸಂಚಯದಿಂದಾಗಿದೆ ಈ ಜಗತ್ತು

ಜೀವಜೀವಗಳ ಮೌಲ್ಯವರಿತು ಬದುಕಲೆತ್ನಿಸುವವಗೆ
ಪ್ರೇಮದಲಿ ಸತ್ಯ ಕಾಣುವ ನರಹರಿಯಾಗೆಂದು
ಹಾರೈಸಿದ ವಾನರ!

ಕ್ರಿಶ್ ಕೃಷ್ಣಮೂರ್ತಿ

ಚಿತ್ರದಿಂ ಮೃದುವಾಗಿ ಶಿರವ ನೇವರಿಸಿ
ಮನವ ಮುಟ್ಟಿದೊಡೆ
ಸತ್ಯದಿಂ ತಟ್ಟಿ ಘಾಡನಿದ್ದೆಯಿಂದೆಬ್ಬಿಸಿ...

(ಪ್ರ)ದೀಪ ತೋರುವುದು ಜ್ಯೋತಿ ನಿಜ
ಮೈಗೆ ಸೊಂಕಿದೊಡೆ

ಅದು ಬಿಸಿ ತಟ್ಟುವುದು ಸಹಜ

-------------------------------------

ಚಿತ್ರ ತಂದ ಪ್ರಶ್ನೆಗಳು

ಸಾವಿರಾರು ಜನರ ಶಿರವ
ಮುಟ್ಟಿ ತನ್ನ ಕೈಗಳಿಂದ
ಶಾಂತಿ ಸುಖವು ತುಂಬಲೆಂದು
ಹಗಲು ರಾತ್ರಿ ಹರಸುತಿರುವ
ಆ ಗುರುವಿನ ತಲೆ ಸವರುವ
ಮಂಗಳನೊಬ್ಬ ಇರುವನೇ?

ತನ್ನ ಹೆತ್ತ ಮಕ್ಕಳನ್ನು
ಸುತ್ತ ಮುತ್ತ ಕುಳಿಸಿಕೊಂಡು
ಕೈಯ್ಯ ತುತ್ತು ಹಾಕಿದಂಥ
ತಾಯಿಗ್ಯಾರು ಒಲವಿನಿಂದ
'ಅಮ್ಮಾ, ಇಕೋ ತಿನ್ನು' ಎಂದು
ಅನ್ನವನ್ನು ಬಡಿಸುವರ್?

ಇಳೆಯ ತಮವ ಕಳೆಯಲೆಂದು
ಸುಪ್ರಭಾತ ಹಾಡಲೆಂದು
ತನ್ನ ಬೆಳಕ ಪಿಡಿದು ಬಂದ
ನಿತ್ಯ ಉದಯ ವಾದ ರವಿಗೆ
ಮಾತಿಗಾದ್ರೂ ಕೇಳುವರೇ
'ಬಿಡುವು ಬೇಕೆ ನಿನಗೆ' ಎಂದು?

ಜನ ಕೋಟಿ ಬೇಡಿಕೊಂಡ
ಪೂಜೆ, ಹೋಮ, ನಮನ ಗಳಿಗೆ
ಅಸ್ತು ಎನುವ ಹರಿಯು ಇರಲು,
'ದೇವಾ ನೀನು ಹೇಗೆ ಇದ್ದೀ'
ಎಂದು ಕೇಳ್ವ ಭಕ್ತರಾರು
ಇರುವರೇನು ಸ್ವಾರ್ಥ ಜಗದಿ?

(ಈ ಪ್ರತಿ ಪ್ರಶ್ನೆಯಲ್ಲೂ ಆಂಜನೇಯ ಅಡಗಿಕೊಂಡು ಕೂತಿದ್ದಾನೆ. ಪತ್ತೆ ಮಾಡಿ,
ದರ್ಶನ ಪಡೆಯಿರಿ!)


ಆಗಿನವರು ಈಗ ಬಂದರೆ?..


ಪ್ರಸಾದ್ ಸಾಮಕ

ಯಾರು ಅರಿವರು ನಮ್ಮ ಮೊಬೈಲಿನ ಮಹಾತ್ಮೆ
ರಾಜಕುಮಾರ್ ಎನ್ ಟಿ ಆರ್ ರಂತೆ ಕಾಣುತಿರುವ ಈ ಭ್ರಮೆ
ಎಲ್ಲದಕು ಕಾರಣನು ಆ ಸ್ಟೀವ್ ಜಾಬ್ ಮಹಾತ್ಮಾ

ಪಡ ಪಡಾ ಶಿಖಂಡಿಯಂಗಡಿಗಡಿಗೆ
ನುಡಿಯ ಬೇಡಲೋ ಮೂಢ

ಸಿಮ್ಮ ಕತ್ತರಿಸಿ ಬ್ಯಾಟರಿ ತುಂಡರಿಸಿ
ತೊಳೆಯುವೆ ನಿನ್ನ ಕ್ಲೌಡ ಕೂಡ !

ಪ್ರಭಾತ್ ಜೋಶಿ

ಏಕೋಮಾತಾ ಪುತ್ರರು ಪ್ರಿಯ ಭೀಮಾರ್ಜುನರು.
ವಿಭೂತಿ ಲೇಪಿತ ಭೀಮನು,  ಲಂಬರೇಖಾ ಧರಿತ ಧನುರ್ಧಾರನು.
ಏಕೋಮಾತಾ, ವೇದ ಮಾತೆಯಿಂದ ಜನಿಸಿವೆ
ಶೈವ, ವೈಷ್ಣವ ವೇದಾಂತಗಳು.
ಎಲ್ಲಾ ಮತಗಳ ಮೂಲ ಒಂದೇ
ಅಂತ ಸಾರುತ್ತಿದೆ ನಮ್ಮ ನೂತನ ಮಹಾಭಾರತ.

ಸಂಜಯನು ಕುರುವಂಶ ದಾಸನಾಗಿದ್ದರೂ, ಧರ್ಮಮಾರ್ಗದಲ್ಲಿಯ ಪಾಂಡುಪುತ್ರರಿಗೆ ಅವರ ಒಲವು. Mobile ದೂರವಾಣಿಯಂತಿರುವ ಸಂಜಯನು ಈ ಚಿತ್ರದ ಗಾಂಭೀರ್ಯ.

ಪ್ರದೀಪ್

ಹೆಣ್ಣು ಹೊನ್ನು ಮಣ್ಣು ಎಂಬ
ಮಾಯೆ ಇದ್ದದ್ದೇ ಸದಾಕಾಲ
ಅದನ್ನೂ ಮೀರಿದ್ದು
'ದೇವರ'ನ್ನೇ ಸೃಷ್ಟಿಸಿದ
ಮಾನವನ ಮಾಯಾಜಾಲ
ಅದುವೇ ಟೆಕ್ನಾಲಜಿ ಎಂಬ ಅಂತರ್ಜಾಲ

ಅಂದು ಸೀತೆ ಕದ್ದ ರಾವಣ
ಅವನಿಗಾಯ್ತು ರಾಮನಿಂದ ಮರಣ
ಇಂದು ಇದ್ದಿದ್ರೇ ರಾಮ-ರಾವಣ
ಆಗುತ್ತಿತ್ತೇ ರಾಮಾಯಣ?

ಕೈಯಲ್ಲಿ ಫೋನೊಂದಿದ್ದರೆ ಸಾಕಿತ್ತು
ಬರುತ್ತಿತ್ತು
ಪ್ರಪಂಚವೇ ತನ್ನ ಕೈಲಿದೆ ಅನ್ನೋ ತಾಕತ್ತು
ಆಗ ಇನ್ನೊಬ್ಬನ ಹೆಂಡತಿ ಕತೆ ಯಾರಿಗೆ ಬೇಕಿತ್ತು?
ವಾಟ್ಸಾಪ್ ಫೇಸ್ಬುಕ್ ನೋಡೋದೇ ಸಾಕಾಯ್ತು
ಇನ್ನು ಯಾರಿಗೆಲ್ಲಿದೆ ಪುರುಸೊತ್ತು!

ಸುಖಸಂಸಾರದ ಮುಖ್ಯ ಸೂತ್ರ
ಕಲಿಯುಗದ ಫೋನೆಂಬ ಅಸ್ತ್ರ
ನನಗಿಲ್ಲವಲ್ಲ ಅಂತ ದೇವರಿಗೂ ಕೊರಗು
ಇದ್ದಿದ್ರೇ - ಆಗ್ತಿದ್ದ ಅವನೂ ಬಾಯ್ಬಿಟ್ಕೊಂಡು ಬೆರಗು!


ಸಂಸಾರ - ಸೂರ್ಯ


ಡಾ.ಗೀತಾ ಪಾಟೀಲ್

ಬಾನಂಗಳದಲ್ಲಿ ಚೆಲ್ಲಿದೆ ರಂಗು ರಂಗಿನ ಬಣ್ಣ
ಸವಿಯುತ ನಿಂತಿಹೆವು ನಾವ್ ಕನ್ನಡದ ಕಣ್ಮಣಿಗಳಣ್ಣ

ಧನ್ಯರಾದೆವೋ ಸವಿದು ನಿನ್ನೀ ಸೃಷ್ಟಿಯ ಈ ಪರಿ ಸೊಬಗನ್ನ
ಏಳೇಳು ಜನ್ಮಕ್ಕಿರಲಿ ಈ ಸೌಭಾಗ್ಯ ಸಮಸ್ತ ಕನ್ನಡಿಗರಿಗಣ್ಣ

ಪ್ರದೀಪ್

ಮಾವಿನ ರಂಗಿನ ಕಿರಣಗಳ ಬೀರಿ
ಬಾನಿನಗಲಕ್ಕೂ ತಳಿರು ತೋರಣ ಕಟ್ಟಿ
ತಮಸೋಮ ಜ್ಯೋತಿರ್ಗಮಯವೆಂದು
ಉದಯಿಸಿ ಬರುತಿಹ ಸೂರ್ಯನ ನೋಡು
ಇದುವೇ ಯುಗಾದಿ ಕಂದಾ!

ಮಾನಸದಿ ಪ್ರಜ್ವಲಿಸು ಜ್ಞಾನಜ್ಯೋತಿಯ ಪ್ರಭೆಯ
ಹೊಸ ದೃಷ್ಟಿ ಪ್ರೇಮಭಾವಗಳಿಂದ ಆಲಂಗಿಸು ಮಾನವತೆಯ
ಹೃದಯ ವೈಶಾಲ್ಯದಿಂ ನಡೆಸು ಜೀವನವ
ಆಗ ಪ್ರತಿದಿನವು ಹಬ್ಬವೇ ನೋಡು
ಅದುವೇ ಯುಗಾದಿ ಕಂದಾ!

ಕಾಲದಾದಿಯಿಂದ ಇರುವರು ಅಪ್ಪ ಅಮ್ಮ ಮಕ್ಕಳು
ಸೃಷ್ಟಿಲೀಲೆಯ ನಡೆಸುವವಗೆ ಪರಬ್ರಹ್ಮನೆನುವರು
ಜೀವ ಜಗದ ನೃತ್ಯ ಪರಿಯು ನಿತ್ಯ ನೂತನವು
ಮಗುವಿನಲ್ಲಿ ಬರಲಿಹ ಮನುಜಕುಲವ ನೋಡು

ಇದುವೇ ಯುಗಾದಿ ಕಂದಾ!

ಪ್ರಸಾದ್ ಸಾಮಕ

ಕಾಮನ ಹುಣ್ಣಿಮೆಯ ರಂಗಿಗೆ ಬೀಗಿದ ಚಂದಿರನ ಹೋಂಕಾರಕೆ ಬೆಚ್ಚಿ ಎಚ್ಚೆತ್ತ ರವಿ ವರುಣರು ಹೋಡಿರುವ ತಂತ್ರ

 ನೀ ನೋಡುತಿರುವ ಈ ಆಕಾಶದಲ್ಲಿನ ವಿಚಿತ್ರ ನಿಜಕ್ಕೂ ಒಂಡು ಮನೋಹರ ಸುಚಿತ್ರ

ನೀ ನೋಡಿದ ಬೀಗಿದ ಬಣ್ಣಗಳ್ಹರಡಿದ್ದು ಭಾರತದ ಕೆಲ ಭಾಗದಲ್ಲಿ ಮಾತ್ರ ಓ ಮಿತ್ರ

ನಾವೀರ್ವರೂ ಸಹಗೂಡಿ ಹಚ್ಚಿರುವ ಈ ಚಿತ್ರ ನೋಡಿ ಬೆರಗಾಗುವರು ಕೋಟ್ಯಂತ್ರ

ಓ ನನ್ನ ಬಂಗಾರಿ ನೋಡೀ ವಿಸ್ಮಯ ನಿನಗಾಗೇ ಮಾಡಿರುವ  ಪಂಚಭೂತಗಳ ಷಡ್ಯಂತ್ರ

ಹೇಳಿಹರೊಂದು ನೈಜ ಕಥೆಯ ತಿಳಿಸಿಹರೊಂದು ನಿನಗಾಗೇ ಸ್ರುಷ್ಟಿಸಿದ ಮಹಾಮಂತ್ರ

ಬೇಕಿಲ್ಲ ಬಹುದಿನ ಚಕೋರೀ ನೋಡಲೆಮಗೆ ನೀನರಳಿ ಬೆಳಗಿ ಬಿಂಕದಿ ನಡೆವ ಮನ್ವಂತ್ರ

ಮರೆಯದಿರು ನಿನ್ನೊಬ್ಬನೇ ಸನ್ಮಿತ್ರ ನಿನ್ನಪ್ಪನ ಹೆಗಲೇರಿದರೂ ತಿಳಿದಿರುವ  ತಾ ಸ್ವತಂತ್ರ !

ಕ್ರಿಶ್ ಕೃಷ್ಣಮೂರ್ತಿ

ಆಹಾ...ಅತ್ಯುತ್ತಮ ಕಾವ್ಯಧಾರೆಯ ಪಯಣ 
ಸವಿಯುತ್ತಾ ನನ್ನನ್ನೇ ನಾ ಮರೆತೆ ಕೆಲ ಕ್ಷಣ 
ಈ ಕವನ, ಸ್ಮರಣೆ ಬಾಂಧವರ ಪದಗಳೆಲ್ಲಾ ಭಾವಪೂರ್ಣ 
ವರ್ಷಾವಧಿ ಹಬ್ಬಕ್ಕೆ ಎತ್ತಿಕಟ್ಟಿದ ಹಸಿರು ತೋರಣ 
ಸೂರ್ಯ ಶಶಾಂಕರಿಗರ್ಪಿತ ದಿವ್ಯಾಭರಣ 
ಸಿಹಿ ಹೋಳಿಗೆಯ ಹೂರಣ, ಯುಗಾದಿಯ ರಸದೌತಣ..

Punಡಿತ ಕ್ರಿಶ್ ಉವಾಚ

ಹೇವಿಳಂಬಿ ಯುಗಾದಿ ಆಗಮನ

ಇಷ್ಟು ವರ್ಷ ಯಾವಾಗ್ಲೂ ತಡವಾಗಿ ಹೋಗುವ ಎನ್ನಾಕೆ
ಅಂದ್ಕೊಂಡ್ಳು "ಹೇವಿಳಂಬಿಲಾದ್ರೂ ಹೋಗ್ಬೇಕು ಸರಿಯಾದ ಸಮಯಕ್ಕೆ"
"ನಾನ್ ಹೇಳಿದ್ದು ಕೇಳಿಸ್ಕೊಂಡರಾ?" ಬಂತು ನಂಗೆ ಹುಕುಂ - ಕೆಲಸಕ್ಕೆ
"ಎಲ್ಲ ಕಡೆ ತಳ್ಳಿ ಗಡಿಯಾರಾನಾ ಎರಡು ತಾಸು ಹಿಂದಕ್ಕೆ"

*********

ಈಗ ಎಷ್ಟುವರ್ಷವಾದರೇನು ನಾನೆ ಬೆಪ್ಪ
"ಯಾಕೆ ನಿನಗೇನೂ ಗೊತ್ತಿಲ್ಲ ಅಪ್ಪ?,
ಎಂದು ಕಲಿಯುವೆ ನೀ ಅಲ್ಪ ಸ್ವಲ್ಪ
ವಾಟ್ಸಪ್ಪ, ಆ appಆ, ಈ appಆ ?"

"ಪ್ರತಿ ನಿತ್ಯ ಕೇಳ್ತಿಯಾ ಪ್ರಶ್ನೆ ನೂರೆಂಟು
ಅಲೆಕ್ಸಾನು ಸುಂಕೂತ್ಲು ತಲೆಮೇಲೆ ಕಯ್ಯಿಟ್ಟು
ತೋರಿಸಿಕೊಟ್ಟೆನಲ್ಲ ಮಾಡುವುದು ಅಪ್ಪರೇಟು
ಹೇಳಿಸಾಕಾಯ್ತ ಟೀವಿ ರಿಮೋಟು ಕ್ರೋಮ್ಕಾಸ್ಟು"


ಎಂದೂ ತಿಳಿಯದಿರಲಿ ಅವರು
ನಮ್ಮನ್ನಾ ಪೆಸ್ಟು
ತಂದೆ ತಾಯಿ ಬಯಸುವರು
ಮಕ್ಕಳಿಗೆ ಬೆಸ್ಟು

***************

ಪ್ರಭಾತ್ ಜೋಶಿ:

ರಚನೆ ಸಾಗಲಿ ಖುಷಿಯ ನೀಡಲಿ
ಜನ-ಮನಗಳ ರಂಜಿಸಿ
ಮುತ್ತಿನಂದದಿ ನುಡಿಗಳಿರಲಿ
ಸಹೃದಯವು ಸ್ಪಂದಿಸಿ

ಭಕ್ತವತ್ಸಲ ಆರ್: ರಾಗ - ದೋಣಿ ಸಾಗಲಿ

ಕ್ರಿಶ್:

ಧನ್ಯವಾದಗಳು ಸಾರ್!
ನಾನು ಹಾಡಲು
ಟ್ರೈ ಮಾಡಿದ್ದೆ
ಯಾಕೋ ಸರಿಹೋಗಲಿಲ್ಲ
ಶುದ್ಧ ಸನ್ಯಾಸಿಯಲ್ಲಿ

ಪವಮಾನ: ಶುದ್ಧ ಸಂಸಾರಿಗೆ ಶುದ್ಧ ಸನ್ಯಾಸಿಯೇ?
ಕದನ ಕುತೂಹಲ ಟ್ರೈ ಮಾಡಿ ಸಾರ್ ಖಂಡಿತಾ ಬರತ್ತೆ

ಕ್ರಿಶ್:

ಹಾಡಿ ಕದನ ಕುತೂಹಲ
ಅನುಭವಿಸಿದ್ದೇನೆ ಸೋಲ

ಎನ್ನ ಶಾಮ ಸಹನಾ ಎಲ್ಲಿ
ಅವಳ  ದರ್ಬಾರ್ ಹಠಾಣ ಎಲ್ಲಿ

ತುಂಡಾಯಿತ್ತೆನ್ನೆ ಖಂಡಚಾಪು
ಕಲಿಯಬೇಕಿನ್ನು ಕರಾಟೆ ಛಾಪು

ಗೆಲುವುದು ಸಾಧ್ಯವೇ ಎನ್ನ ಪಲ್ಲವಿ
ಸುಮ್ನೆ ಕಣ್ಣೋಡಿಸಿದರೆ ಸಾಕು ಆ ಭೈರವಿ

**************

 ಅವಳಿಗೇನು ಕೋಪ?
ಅದು ನಂಗೊತ್ತಿಲ್ಲಾಪ್ಪಾ

ನಾನು ಪ್ರಾರ್ಥಿಸಿದ್ದು "ಹರಿ ಓಂ"
ಅವ್ಳಿಗೆ ಕೇಳಿಸಿದ್ದು "ಅರಿ ಹೋಮ್"

ಅಂದ್ಲು "ಅರಿ ಅಂದ್ರೆ ಶತ್ರು, ನಂಗೂ ಗೊತ್ತ್ರೀ,
ನೀವ್ ಹೇಳಿದ್ದರ ಅರ್ಥ - ನಾನ್ ಮನೆಗೆ ಮಾರಿ"

ನಾನಂದೆ "ಇದು ಸಸಾಸದಲ್ಲಿ ಹೇಳ್ದ ಜೋಕ್ಏ"
ಅವಳಂದ್ಳು "ಇನ್ನೊಂದ್ ಸಾರಿ ಹೇಳಿದ್ರೆ ಜೋಕೇ"

ಸಸಾಸ - ಸರಸ ಸಾಹಿತ್ಯ ಸಲ್ಲಾಪ ವಾಟ್ಸಾಪ್ ಗ್ರೂಪ್

************************************

"ತರಲೆ ನಾನೆರಡು ಮಾರು ಮಲ್ಲಿಗೆ ಹೂವ?"
"ಬೇಡರೀ ಅದು ತರುವುದೆನಗೆ ತಲೆ ನೋವ"
"ಹಾಗಾದ್ರೆ ಒಂದೆರಡು ಮಾತ್ರೆ ತಂದು ಕೊಡಲೇ"
"ಹೋಗ್ರೀ, ನನಗೆ ಬೇಕಿತ್ತೆರಡು ವಜ್ರದೋಲೆ"

******************************

"ಟೂರ್ ಗೈಡ್ ನ ಬಿನ್ನಹ"

ಎಲ್ಲರಿಗೂ ಸ್ವಾಗತ, ಸ್ವಲ್ಪ ತಿರುಗಿರಿ ಇತ್ತ
ನೋಡಿ ಆನಂದಿಸಿರಿ ನಯಾಗರ ಜಲಪಾತ
ಏಳರಲ್ಲೊಂದಿದು ವಿಶ್ವದಾ ಅದ್ಭುತ
ಮಹಾಪೂರ ಧುಮುಕುತಾ ಆಳ ಪ್ರಪಾತ

ತಿಳಿದವರು ಹೇಳುವರು ಇದರ ಭೋರ್ಗತದಾರ್ಭಟ,
ಶಬ್ದಭೇದದಿ ನಾಚಿಸುವುದಿಪ್ಪತ್ತು ಸೂಪರ್ಸಾನಿಕ್ ಜೆಟ್ಟ,
ಸೇರಿರುವ ನೀರೆಯರೇ, ಈಸದ್ದ ಕೇಳುವಾ ಕಿವಿಕೊಟ್ಟು,
ಒಂದು ಕ್ಷಣ ಮಾತನಾಡದೆ ಸುಮ್ಮನಿರುವಿರಾ ದಯವಿಟ್ಟು!

*****************************

ಊರಿಗೆಲ್ಲಾ ಕಲ್ಸಿ ಕೊಟ್ರೂ
ನೀ ಬಡ ಮೇಷ್ಟ್ರು
ಬಾಳ ಸ್ಫೂರ್ತಿ ನೀ ಕೊಡತೀ
ಆದ್ರೇನ್ ಬಿಡು ನೀ ಬಡಸಾಹಿತಿ

ಎಲ್ಲಾ ಸೇರ್ಕೊಂಡ್ ಹಾರ ಹಾಕಿ
ಆರ್ತಿ ಎತ್ತಿದ್ರು
ಆಮೇಲ್ ನೀ ಹೆಂಗಿದೀನ್ತಾನು
ಒಬ್ರೂ ಕೇಳೊಲ್ರು
ಸುಮ್ನೆ ತಿಳ್ಕೊ ಯಾರ್ ಕೇಳ್ತಾರ್
ನೀ ಹೇಳಿದ್ ಹಾಡು
ಎಲ್ರು ಬ್ಯುಸಿ ನೋಡ್ಕೊಂಡಾರು
ಅವರಿಗ್ ಅವರವರಪಾಡು

***********************

ಜಾಮೂನು ಪಾಯಸ ಶಾವಿಗೆ
ಯಾಕವೆಲ್ಲ ಇರುವಾಗ ನೀನು
ಅವೆಲ್ಲ ಸಾಟಿಯೇ ಪ್ರಿಯೆ ನಿನಗೆ
ಸಿಹಿ ನಿನ್ನ ನಗುಮುಖದ ಜೇನು!

ಈ ಕವಿತೆ
ಯಾಕೆ ಗೊತ್ತೇ?
ಗಂಡನಿಗೆ ಡಾಕ್ಟರ್ ಹೇಳಿದ್ದರಂತೆ
ಖಂಡಿತ ಸಿಹಿ ತಿನ್ನಬಾರದಂತೆ!

************************

ದೊಡ್ಡ ಟೀವೀ ಬೇಡಾ ಅಂದ್ರಿ
ನನ್ ಮುಖ ನೋಡ್ತಾ ಕುಂದ್ರಿ
ಅದೆಲ್ಲ ಹೊಗಳಿಕೆ ಸರೀರಿ - ಆದ್ರೆ
ನಾನಿಮ್ಮುಖ ನೋಡ್ತಾ ಕೂರ್ಬೇಕಲ್ರಿ

***************************

Happy Father's Day!
ತಂದೆ ತಾಯಿಯರ ದಿನ
ಪ್ರತಿ ದಿನಾ
ದೈವ ಸಮಾನ
ಸದಾ ವಂದನಾ 🙏🙏🙏
--------
ಕಳಲೆ ಜಾತ್ರೆ...

ಸೂರ್ಯೋದಯದ ಪೂರ್ವ ಕೇಸರಿ ಬಣ್ಣ
ಆಗಸವ ಹಬ್ಬಿ ನಿದ್ದೆಯಿಂ ಅರಳಿಸಿತೆನ್ನ ಕಣ್ಣ
ನಿನ್ನ ಭುಜಗಳನೇರಿ ನಾ ಕೆಳಗೆ ಇಳಿಯೆ
ನೀ ನಡೆದ ಬರಿಗಾಲ ನಾನೆಂದೂ ಅರಿಯೆ

ಊಟಿರಸ್ತೆಯ ಸಾಲು ಮರಗಳಾ ನೆರಳು
ಕೆಲಕಾಲಕುಳಿತು ಮತ್ತೆ ಹಾದಿಗೆ ಮರಳು
ಬಾವುಟದಂತೆ ಮೇಲೆ ನನ್ನೆತ್ತಿ ಹಿಡಿದು
ಹೊಲಗದ್ದೆ ಪಾತಿಗಳ ಕೆಮ್ಮಣ್ಣ ತುಳಿದು

ಎಷ್ಟು ಹೊತ್ತಾದರೂ ಬರದು ಆ ಕಳಲೆ
ಲಕ್ಷ್ಮೀಕಾಂತನ ತೇರೆಳೆದು ತಿನಬೇಕು ಕಡಲೆ
ಜಾತ್ರೆಯೂಟವ ಮಾಡಿ ಹಾಗೇ ನಾ ನಿದ್ದೆ
ಮತ್ತೆ ನಾ ಎದ್ದಾಗ ಮನೆಯೊಳಗೆ ಇದ್ದೆ

• Kalale is a village near Nanjanagudu
-----------------------------
ಜೀವನ ಯಾತ್ರೆ

ನೀನೆಲ್ಲಿಂದಲೋ ಮೊದಲೇ ಬಂದಿದ್ದೆ
ನಾನೆಲ್ಲಿಂದಲೋ ನಿನ್ನಬಳಿ ಬಂದೆ

ನೀನಾದೆ ನನ್ನ ತಂದೆ ನಡೆವ ಪಥ ತೋರಿ
ಎನ್ನ ಮನದಲಿ ಬರೆದೆ ಒಪ್ಪು ಸರಿ ದಾರಿ

ಕಳೆದಿಹವು ದಶಕಗಳು ನೀನೆಲ್ಲೋ ಮರೆಯಾಗಿ
ನೀನೆಂದಿಗೂ ಇರುವೆ ನನ್ನೊಳಗೆ ಚಿರವಾಗಿ


ಹಸಿರು ಉಸಿರು


ಪ್ರದೀಪ್ ಅವಧಾನಿ 

ಹುಟ್ಟಿದ ಪ್ರತಿ ಜೀವಿಗೆ ಬೇಕಿದೆ ಪೋಷಣೆ
ಅಸಂಖ್ಯಾತ ಜೀವರಾಶಿಗಳೆಲ್ಲವುದಕೆ
ಭೂಮಾತೆಯದೇ ಲಾಲನೆ-ಪಾಲನೆ

ಎಲ್ಲರ ಹಸಿವ ನೀಗಬಲ್ಲದು ಭೂತಾಯಿಯ ಕರುಣೆ
ಆದರೆ ಮಾನವನ ಬೇಕುಬೇಕೆಂಬ ದಾಹಕ್ಕಿಲ್ಲವಲ್ಲ ಎಣೆ!
ಎಲ್ಲೆಯಿಲ್ಲದ ಸ್ವಾರ್ಥದಿಂದ ಕೇಳಿ ಬರುತಿದೆ ಪ್ರಳಯಗರ್ಜನೆ!

ಎಲ್ಲಿ ಮರೆಯಾಗಿದೆ ನಿನ್ನ ಜೀವಪರ ಸಂವೇದನೆ?
ಮೀರಿಲ್ಲ ಸಮಯ, ಎಚ್ಚೆತ್ತುಕೊ ಬೇಗನೆ
ಮರೆಯದಿರು ಮನುಜ -
ವನಸಿರಿಯ ಹಸಿರು
ಅದುವೆ ಜೀವರಾಶಿಯ ಉಸಿರು!

ಉಳಿಸು ನೀ, ಬೆಳೆಸು ನೀ
ನಿನ್ನ ಸಲಹುವ ವಾಯು-ಜಲ-ವನ-ವನ್ಯ-ಜನ್ಯ
ಜೀವಸ್ರೋತವನು

ಕೈಗಳೆಲ್ಲಾ ಒಂದಾಗಿ ಕಾಪಾಡಲಿ ಈ ಸಸಿಯ
ಬೀಜ-ವೃಕ್ಷಗಳ ಜೀವಚಕ್ರ ಗತಿಯ

ನಿರಂತರ ಸಾಗಲಿ ಪ್ರಕೃತಿಯ ಆರಾಧನೆ
ಅದರಿಂದಲೇ ಮನುಕುಲದ ಸಂರಕ್ಷಣೆ

ವೃಕ್ಷೋ ರಕ್ಷತಿ ರಕ್ಷಿತಃ!

ಕ್ರಿಶ್ ಕೃಷ್ಣಮೂರ್ತಿ

ಓದಿ ನಲಿದೆ ಅಂದ ಚಂದದ ಈ ಹಾಡ
ಪರಿಸರವ ಬೆಳಗುವ ಪ್ರದೀಪ 'ಕೈ'ವಾಡ
ಇರಬಹುದು ಇಂದಿದೊಂದು ಪುಟ್ಟ ಗಿಡ
ನೋಡ ನಾಳೆ ಹೆಮ್ಮರವಾಗಿ ಪ್ರಕೃತಿ ಪವಾಡ

ಅನಿಲ್ ಭಾರದ್ವಾಜ್

ಕೈಯೊಳಗೆ ಐತೆ ಕಣ್ಲಾ ನಮ್ಜೀವದ ಉಸಿರು
ತಗಡು,ಕಾಂಕ್ರೀಟ್‍ಗಿಂತ ವಾಸಿ ಕಣೋ ಈ ಹಸಿರು.
ನಿಮ್ತಾತ, ನಿಮ್ಮಪ್ಪ ಬದುಕಿದ್ದೇ ಇದರಿಂದ
ಜಾಗಕ್ಕೆ ಕಾಡನ್ನ ಸುಡ್ತಾರೇನೋ ಗೋವಿಂದ.
ಉಳ್ಕೋಬೇಕಾ ನಿನ್ನ ಉಸಿರು

ಮೊದಲು ಬೆಳೆಸು ನೀ ಹಸಿರು

ಡಾ.ಗೀತಾ ಪಾಟೀಲ್

(ಈ) ಪುಟ್ಟ ಸಸಿ ನೆಟ್ಟು ನೀರುಣಿಸಿ,
ಚಿಗುರಿಸಿ, ಹೊಸ ಜೀವ ತುಂಬುವುದರಲ್ಲಿ,
ಅಡಗಿರಲಿ ಸಂತೃಪ್ತಿ
ನಮ್ಮ ನಿಮ್ಮೆಲ್ಲರ ಮನ-ಮನಗಳಲ್ಲಿ,

ಬೆಳೆದು ನಿಂತ ಮರದಲ್ಲಿ
ಪ್ರತಿ ವರ್ಷವೂ ಹೊಸ ಚಿಗುರು,
ಹೊಸ ಹೂವು, ಹೊಸ ಭರವಸೆ

ಇದೆಲ್ಲವೂ ಗೊತ್ತಿದ್ದೇ
ಕರೆದರು ನಮ್ಮವರು
ಯುಗಾದಿಯನ್ನ 'ವಸಂತನ ಪರಿಭಾಷೆ'

ಸಂದರ್ಭ ಸಾಹಿತ್ಯ





ಡಿ.ವಿ.ಗುಂಡಪ್ಪನವರ ಜನ್ಮದಿನದ ಸಂದರ್ಭ

ಕನ್ನಡದ ಸಿರಿ, ಗೀತಾಚಾರ್ಯ ತಾವೇ ಪೂಜ್ಯ ಗುರುವೇ |
ಉನ್ನತಿ, ಆತ್ಮೋದ್ಧಾರಕೆ ಕಗ್ಗದಿಂ ದಾರಿತೋರಿದಿರೆಲ್ಲರಿಗೂ |
ಘನ್ನಮಹಿಮಗೆ ಮೊದಲ್ ನಿಮ್ಮಪಾದಂಗಳಲಿಡುವೆ ಶಿರ |
ಮನ್ನಿಸೀ ಸ್ಮರಣೆ ಮುಕ್ತಕ, ಮಂದಮತಿ ನಾ - ಮಂಕುತಿಮ್ಮ||

- ಕ್ರಿಶ್ ಕೃಷ್ಣಮೂರ್ತಿ

ಪಾರ್ವತಮ್ಮ ರಾಜಕುಮಾರ್ ನಿಧನದ ಸಂದರ್ಭದಲ್ಲಿ

ಯಾರೇ ಕೂಗಾಡಲಿ
ಊರೇ ಹೋರಾಡಲಿ
ಒಂದಂತೂ ಕೇಳುವೆನಿಲ್ಲಿ
ಮುತ್ತುರಾಜನಂತಹವರೆಲ್ಲಿ

ಬೇರೆ ಭಾಷೆಗೆ ಹೋದವನಲ್ಲ
ಕೆಟ್ಟ ಭಾಷೆಯ ಬಳಸಿದವನಲ್ಲ
ಕುಡಿದು ಸೇದಿ ತಲೆ ಕೆಡಿಸಿದವನಲ್ಲ
ಒಬ್ಬಳೇ ಹೆಂಡತಿಯ ಜೊತೆಗಿದ್ದನಲ್ಲ

ಯೋಗಾಭ್ಯಾಸವ ಮಾಡಿದನಲ್ಲ
ಸಮಾಜಕೆ ದಿಕ್ಕ ತೋರಿಸಿದನಲ್ಲ
ಅಚ್ಚ ಕನ್ನಡವ ಉಚ್ಛರಿಸಿದನಲ್ಲ
ಎಡವಿದರೂ ಎದ್ದು ನಿಲ್ಲುವ ಮಕ್ಕಳ ಬೆಳಸಿದನಲ್ಲ

ಅಂತಹ ಕನ್ನಡಿಗ ಮೊದಲು ಹುಟ್ಟಲಿಲ್ಲ
ತಿಳಿದಿದೆ ಇನ್ನೊಮ್ಮೆ ಹುಟ್ಟುವುದೂ ಇಲ್ಲ
ಆ  ಶಿವನ ಯಶಸ್ಸಿಗೆ ಕಾರಣವಾದಳಲ್ಲ

ಅಕ್ಷರ ಕಲಿಯದ ಆ ಧೀರೆ ಪಾರ್ವತಿ ಇನ್ನಿಲ್ಲ

- ಪ್ರಸಾದ್ ಸಾಮಕ


ಮಡದಿಯನ್ನು ಭಾರತಕ್ಕೆ ಕಳಿಸಿ ವಿರಹಿಗಳಾದವರಿಗೆ !

ಕವಿಗ್ಯಾವುದು ಸಮಯ
ಕ್ಷಣಕ್ಷಣವೂ ಕಾವ್ಯಮಯ
ಲೇಖನಿಯೂ ಬೇಡ,
ಕಾಗದದ ತುಂಡೂ ಬೇಡ
ಮನವೆಂಬ ಮಂಟಪದಲಿ
ಮಡದಿಯ ನೆನೆದಿರೆ...
ಅಲ್ಲಲ್ಲ! ತಾಳಿ ತಾಳಿ
ತಾಳಿ ಕಟ್ಟದೇ ಬಿಟ್ಟ
ಕಾಲೇಜಿನ ಸುಂದರಿ
ಈಗೆಲ್ಲಿ ನೀ ಓ ನೀಲ ನಾರಿ
ಮನೆಯಲ್ಲಿ ಮಡದಿಯಿಲ್ಲ
ಮಕ್ಕಳ ಕಾಟವಿಲ್ಲ
ಬೇಸಿಗೆ ರಜೆ ಇದೆಯಲ್ಲ
ಇಂಡಿಯಾಗೆ ಹೋಗಿಹರೆಲ್ಲ
ಒಲ್ಲೆನೆಂದರೂ ಮನದಿ
ಗಟ್ಟಿಯಾಗಿ ಕೂತಿಹಳು ಮಡದಿ
ಇಲ್ಲ ಇದು ಸಕಾಲವಲ್ಲ
ಗೆಳತಿ ನಿನ್ನ ನೆನಪುಗಳೆಲ್ಲ
ಕಸದ ಬುಟ್ಟಿಗೆ ಹಾಕದೇ
ಬೇರೇ ವಿಧಿಯೇ ಇಲ್ಲ

- ಅನಿಲ್ ಭಾರದ್ವಾಜ್

ಪರಿಸರ ದಿನಾಚರಣೆ

🌎☘
ಪ್ರಾಣವೀವ ಗಾಳಿ ಉಸಿರು
ನದಿ ಕೆರೆಗಳ ಕುಡಿವ ನೀರು
ನೀಲ ಗಗನ ಹಸಿರು ತಳಿರು
ತೂಗುವ ತೆನೆ ಹೊನ್ನ ತರು

ಪರಿಸರ ದಿನವಾಚರಿಸುವೆವಿಂದು
ಭೂಮಿ ತಾಯಿ ಪೊರೆವಳೆಂದೂ
ಅವಳನರಿತು ನಮ್ಮ ಒಳಿತು
ಇರವು ಇರದು ಇದನು ಮರೆತು 🌿🌷

- ಕ್ರಿಶ್ ಕೃಷ್ಣಮೂರ್ತಿ



ವಾಹ್ ವಾ

ಕಷ್ಟದ ಶಿರಶಾಸನವಿದು
ಸಖತ್ತಾಗಿ ಮಾಡಿರುವರು
ನಂಕೈಯಲ್ಲಂತೂ ಆಗದು
ತಲೆ ಕೆಳಗಾಗಿ ನಿಂತರೂ!

- ಕ್ರಿಶ್ ಕೃಷ್ಣಮೂರ್ತಿ

******************

ಸಮಾಜದ ನಡವಳಿಕೆ:

ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದರೇ
" ಮಗು ನೀನು ಯಾರು ಹೆತ್ತ ಪುಣ್ಯಾತ್ಮನಪ್ಪ" ಅಂತಾರೆ.

ಅದೇ ಮಗು ಪರೀಕ್ಷೆಯಲ್ಲಿ ವೈಫಲ್ಯ ಹೊಂದಿದರೇ

" ಯಾವಲೇ ಮಾಸ್ತರ ನಿನಗ ಕಲಿಸದಾವ" ಅಂತಾರೆ..

ಯಶಸ್ಸಿಗೆ ತಂದೆ ತಾಯಿ.
ವೈಫಲ್ಯಕ್ಕೆ ಬಡಪಾಯಿ ಮೇಷ್ಟ್ರು


ಕ್ರಿಶ್ :

ಪಾಪ ಏನನ್ನುತ್ತಾರೋಪ್ಪಾ
ಮಾಸ್ತರರ ಅಮ್ಮ ಅಪ್ಪ

ಗೀತಾ ಪಾಟೀಲ್:

ಅಲ್ಲಾ...
ನಾವದೀವಿ ಬಡ ಮಾಸ್ತರ....
ನಮಗ್ಯಾಕ ಹೀಂಗ ಅನ್ತಾರ...

ಕ್ರಿಶ್:

ನಮ್ಮಾಕೀ ಕೂಡಾ ಬಡ ಮಾಸ್ಟರ್ರೀ
ಮನೀಗ್ ಬಂದ್ಮೇಲ್ ಹೇಳ್ತಾಳರೀ -
'ಸ್ಕೂಲ್ ನಾಗ್ ಯಾವ್ ಮಕ್ಕಳ್ರೂ ,
ನನ್ ಮಾತ್ ನಿಮ್ ತರಾ ಕೇಳೋಲ್ರೀ!'

ಪ್ರಸಾದ್ ಸಾಮಕ:

ಒಂದೇ ದಿನದಲ್ಲಿ ಇಷ್ಟೊಂದು ಸಾಲುಗಳೇ
ಉದ್ದಿಶ್ಯವಿತ್ತು ಸ್ಮರಿಸಲು ಆಳಿದ ಆಳಿದ ಕವಿಗಳ ರಗಳೆ
ತಿಳಿದಿರಲಿಲ್ಲ ಈ ಗುಂಪು ಹುಟ್ಟಿದಾಗ ಬಂಧುಗಳೇ
ನಮ್ಮ ಸದಸ್ಯರೆಲ್ಲಾ ಸ್ವತಃ  ಪ್ರತಿಭೆಯುಕ್ಕುವ  ಕವಿಗಳೇ !

*****************************

ಗಂಡ ಆಫೀಸಿನಲ್ಲಿ ಕೂತಿದ್ದಾಗ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ

" *ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡುವ ಆಸೆ*".

ಕೆಳಗೆ ಹೆಂಡತಿ ಕಮೆಂಟ್ ಮಾಡಿದಳು

*ಭೂಮಿ ಮೇಲೆ  ಕಾಲಿಟ್ಟಾಗ ಮನೆಗೆ ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಬನ್ನಿ.*

ಕ್ರಿಶ್:

ನೀ ಅಂದುಕೊಂಡಿರಬಹುದು ನೀನೊಂದು ಹಕ್ಕಿ
ಎಲ್ಲಿದ್ದರೂ ಹಿಡಿದುಕೊಂಡಿರುವಳು ಆಕಿ ನಿನ್ನ ರೆಕ್ಕಿ
ತಾಳಿ ಕಟ್ಟಿದ ಮೇಲೆ ನೀನೇನು ಮಾಡಿದರೂ ಸರಿ
ಮೊದಲವಳ ಅಪ್ಪಣೆಯ ಕೇಳಿಪಡೆವುದ ನೀನರಿ

ಪ್ರದೀಪ್:

ಚಂದಮಾಮ ಕತೆಯಲ್ಲಿ
ಮಾಂತ್ರಿಕ ತನ್ನ ಪ್ರಾಣ
ಸಪ್ತಸಾಗರದಚೆಯ ದ್ವೀಪದಲ್ಲಿ
ಗುಹೆಯಲ್ಲಿರುವ ಅರಗಿಣಿಯಲ್ಲಿ
ಅಡಗಿಸಿಡುವನಂತೆ

ಚಂದದ ಮಾನವನ ಕತೆಯಲ್ಲಿ
ಗಂಡು ಮದುವೆಯಾದಾಗ
ಸಪ್ತಪದಿಯೊಡನೆ
ಸತಿಯೆಂಬ ಅರಗಿಣಿಗೆ
ತಾಳಿ ಕಟ್ಟಿದಾಗ
ತನ್ನ ಮಂತ್ರಬಲದಿಂದ
ವರನಿಗರಿವಿಲ್ಲದಂತೆ
ಪುರುಷಶಕ್ತಿಯನ್ನು ಅದರಲ್ಲೇ
ಅಡಗಿಸಿಟ್ಟುಕೊಳ್ಳುತ್ತಾಳಂತೆ!

ಕ್ರಿಶ್:

ಚಂದಮಾಮ ತಂದ ನೆನಪು

ಆಗೆಲ್ಲ ಊರಲಿರುತಿತ್ತು ಪಬ್ಲಿಕ್ ರೀಡಿಂಗ್ ರೂಮ,
ಅಲ್ಲಿ ಬರುತಿತ್ತು ಒಂದೇ ಒಂದು ಚಂದಮಾಮ,
ಕುಳಿತೊಬ್ಬ ಓದುವನು ಹಿಂದೆ ನಿಲ್ಲುವರು ಹತ್ತಾರು ಮಕ್ಕಳು,
ಅಂವ ಪುಟ ತಿರುಗಿಸಲು ಯಾರೋ ಹೇಳುವರು ಒಂದ್ನಿಮಿಷ ತಾಳು,
ಇಂದಿಲ್ಲ ನಾಳೆ ಓದುವೆನೆಂದು ನಾ ಓಡುವೆ ಮನೆಕಡೆಗೆ,
ಸಂತಸವ ಕೊಡುವ ಆಗಸದ ಚಂದಮಾಮ ಅಲ್ಲಿವರೆಗೆ.

ಪ್ರದೀಪ್:

ಮದುವೆಯ ಮೊದಲು
ರೋಸ್ ಡೇ.  ವ್ಯಾಲೆಂಟೆನ್ಸ್ ಡೇ. ಬರ್ತ್ ಡೇ.
ಪುರುಸೊತ್ತಿದ್ದಾಗೆಲ್ಲಾ ಕಾಫಿ ಡೇ

ಮದುವೆಯ ನಂತರ . ಒಂದೇ ಡೇ.
"ನನ್ನ ಪಾಡಿಗೆ ನನ್ನ ಬಿಟ್ ಬಿಡೇ......

ಕ್ರಿಶ್:

ನನ್ನನೆಂದೂ ಮರೆಯದೆ
ನೀನೇ ಎಲ್ಲ ಮುಗಿಸದೆ
ನನಗೂ ಒಂದೆರಡು ಇ ಡೇ
ಅಂಬೋ ಡೇ ಪಕೋ ಡೇ

ಗೀತಾ:

ಬಿಟ್ಟೇನೆಂದರೂ ಬಿಡದೀ ಮಾಯೆ...
ಏಳೇಳೂ ಜನ್ಮದ ನಂಟಿದು ಮಾಯೆ...

ಶೇಷ:

ಹೆಣ್ಣಿಗೆ ಇರಬಾರದು ಹಠ
ಗಂಡಿಗೆ ಇರಬಾರದು ಚಟ
ಇದನ್ನು ಅರಿತರೆ ಸಂಸಾರ ಸುಂದರ
ಇಲ್ಲದಿದ್ರೆ ಆಗುವುದು ಜೀವನ ಭಯಂಕರ

********************************

"KSA  ಮೆರವಣಿಗೆ!"

ಸಹನಾ ಕೇಶವ ಕುಟುಂಬದ ಬೀಳ್ಕೊಡುಗೆ
ಸ್ವಲ್ಪ ನೆನಪಿಸುವೆ ನಾ ನಿಮಗೆ
ಇವರು ಅರಿಜೋನಾ ಕನ್ನಡಿಗರಿಗೆ ಕೊಟ್ಟ ಕೊಡುಗೆ
ನಮ್ಮ ಬೆಳ್ಳಿ ಹಬ್ಬದ ಸಿರಿ ಮೆರವಣಿಗೆ!

ಕನ್ನಡದ ಕಂಪ ಬೀರಿ ಮೊಳಗಿತು ನಮ್ಮ ಹಾಡು
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"
ನಾಡ ಧ್ವಜ ಸಿಂಗರಿಸಿದ ಕನ್ನಡಾಂಬೆಗೆ ನಮನ
ಗಂಡಾಗುಂಡಿಯಿಲ್ಲದ ರಾವ್ ದಂಪತಿಗಳ ಸಮ್ಮಿಲನ!

ಕುವೆಂಪು ಸರ್ ಎಂ ವಿಶ್ವೇಶ್ವರಯ್ಯ
ಟಿಪ್ಪು ಜಯಚಾಮರಾಜೇಂದ್ರ ಒಡೆಯ
ಕಿತ್ತೂರು ರಾಣಿ ಚೆನ್ನಮ್ಮನ ಮೆರೆತ
ಓಬವ್ವನ ಒನಕೆ ಬಲು ಹೊಡೆತ!

ಪುಟಾಣಿಗಳ ನಡೆತ, ಮಕ್ಕಳ ಕುಣಿತ, ಕೋಲಾಟದ ಕಲೆತ,
ಗಣೇಶಗೆ ಆರತಿ ಎತ್ತುತ, ಮದ್ದಳೆ ತಾಳ ಮೇಳ ಸಂಗೀತ,
ಸುಲಗ್ನಾ ಸಾವಧಾನ ಪುರೋಹಿತ ಮಂತ್ರಹೇಳುತಾ,
ವಧು ವರರು ತಾಳಿ ಕಟ್ಟುತ,
ಬೇಲೂರು ಶಿಲಾಬಾಲಿಕೆಯರು ಹಾಡುತಾ ಸುಂದರ ನೃತ್ಯ ಮಾಡುತಾ!

ಕ್ರಿಕೆಟ್ ಪಟುಗಳು ಬ್ಯಾಟ್ ಚೆಂಡು ಆಡುತ,
ಲುಂಗಿ ಉಟ್ಟು ಗಿಟಾರ್ ಮಿಡಿದು ಹಾಡುತ ರಘು ದೀಕ್ಷಿತ,
​​ಯಾರು ತಾನೇ ಮರೆಯಲು ಸಾಧ್ಯ --
ಆ ಹಾವಭಾವದ ಶಕುಂತಲಾ ದೇವಿಯ ಗಣಿತ!

ಬಣ್ಣ ಬಣ್ಣದ ಜರಿ ಸೀರೆ ಸೆರಗುಗಳು ಹೊಳೆಯುತಾ,
ರಂಗು ರಂಗಿನ ಲಂಗ ದಾವಣಿ ಪಜಾಮ ಕುರತಾ,
ಗಟ್ಟಿ ಗಂಟಿನ ಕಚ್ಚೆ ಪಂಚೆ ಹಿಡಿತ,
ಹೀಗೆ KSA ಬೆಳ್ಳಿ ಹಬ್ಬಕೆ ಮೆರಗು ತಂದಿತಾ!

ಸಹನಾ ಮಾಡಿಸಿದ ಮೆರವಣಿಗೆ
ನಮ್ಮ ಕನ್ನಡ ಸಂಘದ ಬೆಳ್ಳಿಹಬ್ಬದ ಹಿರಿಮೆಗೆ!

ಶುಭ ಹಾರೈಕೆಗಳೊಂದಿಗೆ,

-ಕ್ರಿಶ್ ಕೃಷ್ಣಮೂರ್ತಿ


*************************

ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಸಂದರ್ಭದಲ್ಲಿ

ಕ್ರಿಶ್ ಕೃಷ್ಣಮೂರ್ತಿ:

ನಮ್ಮ ಮನೆ ವಿಶೇಷ
ಭೀಮನ ಅಮಾವಾಸ್ಯೆ
ಆಗುತ್ತಲೇ ಇರುವುದು
ನಿತ್ಯ ಗಂಡನ ಪೂಜೆ!


ಬಣ್ಣ ಬಣ್ಣದ ಚಿಣ್ಣರು



ಡಾ.ಗೀತಾ ಪಾಟೀಲ್

ಬಣ್ಣ ಬಣ್ಣದ ಚಿಣ್ಣರ ಮೊಗವು ಚೆನ್ನ
ಸೂರೆಗೊಂಡಿತು ನನ್ನ ಮನಸ್ಸನ್ನ
ಕಾಲಘಟ್ಟದಲ್ಲಿ ಮಾಸುವ ಚಿಣ್ಣರ ಬಣ್ಣ
ವ್ಯಥೆಗೀಡುಮಾಡಿತು ನನ್ನೀ ಮನಸ್ಸನ್ನ

ಪ್ರದೀಪ್

ಕೆಂಪು, ಹಳದಿ, ಹಸಿರು ಬಣ್ಣ
ಮನೆಸೂರೆಗೊಳ್ಳುವ ಮೋಹಕ ಬಣ್ಣ
ಸೆಳೆದಿವೆ ನೆರೆದಿಹ ಚಿಣ್ಣರ ಕಣ್ಣ
ಹಿಡಿಯಲಾದೀತೆ ಪುಟಿಯುವ ಪುಟಾಣಿಗಳನ್ನ?
ಎಲ್ಲೆಡೆ ತುಳುಕಿದೆ ಬಣ್ಣ, ಬಣ್ಣ!

ಜಾತಿ-ಮತ-ವರ್ಣಗಳ ಮರೆಸಿಹ ವರ್ಣ!
ಮುಗ್ಧ ಮನಗಳ ಸಂಭ್ರಮವ ಮೆರೆಸಿಹ ಬಣ್ಣ!
ಒಡನಾಡಿಗಳ ಬೆಸೆದಿಹ ಸುಂದರ ಬಣ್ಣ
ಹಾರಾಡುವ ಹಕ್ಕಿಗಳಾಗಿ ಹರಡಿವೆ ಬಣ್ಣ
ಎಲ್ಲೆಡೆ ತುಳುಕಿದೆ ಬಣ್ಣ, ಬಣ್ಣ!

ಬಣ್ಣದ ಕನಸುಗಳು ತುಂಬಿವೆ ಕಣ್ಣ
ತಾರೆಗಳರಸುತ ತಿರುಗುವ ಜೀವನ ಚಕ್ರವಿದಣ್ಣ
ಸ್ನೇಹವೇ ನಗುವಿನ ಮೊಗಗಳ ಸ್ಫೂರ್ತಿಯಣ್ಣ

ವರ್ಣಮಯ ಬದುಕಿನ ತಿರುಳಿಷ್ಟೇನಣ್ಣ!

ಕ್ರಿಶ್ ಕೃಷ್ಣಮೂರ್ತಿ

ಒಂದೆರಡು ಪ್ರಶ್ನೆಗಳು:

ಹಾಡಿ ಕುಣಿಯುತ ಆಟವಾಡುತ
ಎನ್ನ ಮಡಿಲಲಿ ಒರೆಗಿದಾ
ತೆರೆದ ಬಾನಿನ ಸೊಬಗ ಸವಿಯುತ
ಕನಸು ಕಾಣುತ ನಲಿಯುತಾ

ನವ್ಯ ಚೇತನದಿಂದ ಅರಳಿದ
ಪುಟ್ಟ ಮಕ್ಕಳ ಕುಸುಮವೇ
ವಸಂತ ತಂದ ಉಡುಗೊರೆ
ನಿನಗೆ ಮಿಗಿಲು ಏನಿದೆ?

ಕೆಂಪು, ಪಚ್ಛೆ, ಪವಳ, ಮುತ್ತು
ಎನ್ನೊಡಲಲಿರುವಾ ವಜ್ರಗಳ್
ಈ ಬಣ್ಣ ಬಣ್ಣದ ಅಷ್ಟದಳಗಳ

ಒಂದು ಹೂವಿಗೆ ಸಾಟಿಯೇ?

ಪ್ರಸಾದ್ ಸಾಮಕ

ಯೊ ಸೂರ್ಯಪ್ಪ ಸಾಲಿ ಮಂದಿ ಹೇಳ್ತಾರ
ನಿನ್ ಕಿರಣದಗದಾವ ಬಣ್ಣದ ಚಿತ್ತಾರ

ಸೇರ್ಯಾದ್ ನೋಡಲ್ಲೊಂದೆಂಟ್ಮಂದಿ ಶಾಣ್ಯಾರ ಸಂತಿ
ದಿಟ್ಸಾಕ್ ಹತ್ತಾರ ಮಾಡ್ಕೊಂನ್ಡೊಂದ ಸೂರ್ಯಕಾಂತಿ

ಗುರಿ ಒಂದೇ ಇತ್ರಿ ಬಣ್ಣ ಇಟ್ಕಾಂಡ್ ಬಿದ್ಗಾಂಡೀ ಹೈಕ್ಳ ಮನಸ್ನಾಗ
 ಬೆಳಕಿನ ಗುಟ್ಟು ರಟ್ಟಾದಾಗ ಸೂರ್ಯಾನ್ ಮೊರಿ ಕಾಣ್ತಾದ್ ಹ್ಯಾಂಗ  !

Tuesday, July 11, 2017

ಕಪ್ ಕಾಫಿ ಜೊತೆ ಅಜ್ಜಿ


ಕ್ರಿಶ್ ಕೃಷ್ಣಮೂರ್ತಿ

ಕಾಲಕೂಟವ ಸೇವಿಸಿ
ಜಗವ ಕಾಪಾಡಿದ ಹರನಿಗೂ,
ಪೀಯೂಷವ ಪಾರ್ಥನಿಗಿತ್ತು
ನಮ್ಮನೆಚ್ಚರಿಸಿದ ಹರಿಗೂ,
ಇವೆರಡಮ್ ಬೆರೆಸಿ ಸಂತಸದಿಂ
ಕುಡಿಯಲಿರುವ ಈ ಹಿರಿತಾಯಿಗೂ,
ಸಾದರದಿಂ ಶುಭೋದಯ,
ಸುಪ್ರಭಾತ, ವಂದನೆಗಳ್!


ಕಾ(ಲಕೂಟ) + ಪಿ(ಯೂಷ) = ಕಾಫಿ


ಪ್ರದೀಪ್ ಅವಧಾನಿ

ಕೃಶಕಾಯ
ಸುಕ್ಕು ನೆರಿಗೆಗಳ ಮೈ-ಮುಖ
ತನ್ನ ಜೀವ ತೇಯ್ದು
ಎನಿತು ಜನರಾರೈಕೆ ಮಾಡಿದೆಯೋ
ಈ ಮುದಿಜೀವ

ದೇಹ ಸೊರಗಿ ಒಣಗಿದರೂ
ದಣಿವ ಮೀರಿದ ಅಮಿತ ಜೀವನೋತ್ಸಾಹ

ಆದರೇನು?
ಒಂದು ಕಪ್ಪು ಕಾಫಿ ಸಾಕು
ಮೈ-ಮನ ಬೆಚ್ಚಗಾಗಿಸಲು
ಕಣ್ಣಲ್ಲಿ ಜೇವಕಾಂತಿ ತುಂಬಲು
ಮೊಗದಲಿ ಮಂದಹಾಸ ಮೂಡಲು
ಜೇವನದ ಅಂದ ಸವಿಯಲು



ಹೂ ನಗೆಯ ಹೂ ಮಾರುವಾಕೆ

ಪ್ರಸಾದ್ ಸಾಮಕ ಗುಂಡು ಮಲ್ಲಿಗೆಯ ಮುಖ ಕನಕಾಂಬರದ ಕೆನ್ನೆ ಸೇವಂತಿಗೆಯ ಬಟ್ಟು ದಾಸವಾಳದಂತೆ ಅರಳಿರುವ ಶರೀರ ಸಂಪಿಗೆಯ ಸರಳತೆ ನೈದಿಲೆಯ ನಡೆ ಕಮಲದ ಕಣ್ಣು ಪಾ...